ಶಿವಮೊಗ್ಗ:- ದೇಶದ 2ನೇ ಅತಿದೊಡ್ಡ ಸಿಗಂದೂರು ಕೇಬಲ್ ಸೇತುವೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಗೆ ಕಾರಣವಾಗಿರೋ ಬೆನ್ನಲ್ಲೇ ಹೊಸ ಜಟಾಪಟಿ ಶುರುವಾಗಿದೆ.
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಇದೀಗ ಅದೇ ವಿಚಾರವಾಗಿ ಅಶೋಕ್ ಹಾಗೂ ಸಿದ್ದರಾಮಯ್ಯ ನಡುವೆ ಸಮರ ಶುರುವಾಗಿದೆ.
ಈ ಸಂಬಂಧ ಬೆಂಗಳೂರಲ್ಲಿ ಮಾತಾಡಿರುವ ಸಿಎಂ, ಪೂರ್ವನಿಯೋಜಿತ ಕಾರ್ಯಕ್ರಮ ಇತ್ತು. ಹೀಗಾಗಿ ಮುಂದೂಡಿ ಎಂದು ನಾನು ಪತ್ರ ಬರೆದಿದ್ದೆ. ಆದರೆ, ಸೇತುವೆ ಈಗ ಉದ್ಘಾಟನೆ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಅಲ್ಲದೆ, ಅಶೋಕ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ. 60 ವರ್ಷಗಳಲ್ಲಿ ಕಾಂಗ್ರೆಸ್ಗೆ ಸಾಧ್ಯವಾಗದ್ದನ್ನು ಮೋದಿ ಸರ್ಕಾರ ಮಾಡಿ ತೋರಿಸಿದ್ದಕ್ಕೆ ಸಿದ್ದರಾಮಯ್ಯಗೆ ಹೊಟ್ಟೆಯುರಿ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ, ತಾನು ಕೊಡ, ಪರರನ್ನು ಕೊಡಲು ಬಿಡ. ಇಂದಿನ ಸಂತೋಷದ ದಿನವನ್ನ ಅಲ್ಲಿನ ಜನಸಾಮಾನ್ಯರು ಸಂಭ್ರಮಿಸುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ, ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಎನ್ನುವಂತೆ ನಾಡಿನ ಮುಖ್ಯಮಂತ್ರಿಗಳಾಗಿ ಇಂತಹ ಐತಿಹಾಸಿಕ ಸುದಿನದಂದು ಅಲ್ಲಿನ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬದಲು ಇಲ್ಲಸಲ್ಲದ ಕ್ಯಾತೆ ತೆಗೆದಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.