ಬೆಂಗಳೂರು:- ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಕೈಮೇಲಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಪುನರ್‌ಸ್ಥಾಪನೆಯ ಪ್ರಯತ್ನಗಳಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿವರು ಮತ್ತು ಶಾಸಕರು ಥಂಡಾ ಹೊಡೆದಂತಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎರಡು ಭಾರಿ ಮುಖ್ಯಮಂತ್ರಿಯಾಗಿ ದೇವರಾಜ್ ಅರಸು ಸೇರಿದಂತೆ ಎಲ್ಲಾ ನಾಯಕರ ದಾಖಲೆ ಮುರಿದಿದ್ದ ಸಿದ್ದರಾಮಯ್ಯ ಅದ್ವೀತಿಯ ನಾಯಕರಾಗಿ ಹೊರಹೊಮಿದ್ದರು. ರಾಜಕೀಯದಲ್ಲಿ ಮೊದಲಿನಿಂದಲೂ ಸಿದ್ದರಾಮಯ್ಯ ಅವರು ತಮ ಬೆಂಬಲಿಗರ ಹಿತರಕ್ಷಣೆ ಮಾಡುವಲ್ಲಿ ಎತ್ತಿದ ಕೈ. ಯಾವುದೇ ಸಂದರ್ಭದಲ್ಲೂ ರಾಜೀಯಾಗುವುದಿಲ್ಲ ಎಂಬ ಮಾತುಗಳಿದ್ದವು. ಅದೇ ರೀತಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಮತ್ತು ಸೈಲೆಂಟ್ ಕಿಲ್ಲರ್ ಎಂಬ ವ್ಯಾಖ್ಯಾನಗಳಿವೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬೆಳಗಾವಿಯ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ವಿರುದ್ಧ ಒಳಗೊಳಗೆ ಕತ್ತಿ ಮಸಿಯುತ್ತಿದ್ದರು. ಕೊನೆಗೆ ಅವರು ಲೈಂಗಿಕ ಹಗರಣಕ್ಕೆ ಸಿಲುಕಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಡಿ.ಕೆ.ಶಿವಕುಮಾರ ವಿರುದ್ಧ ತೊಡೆ ತಟ್ಟಿದ ಬಹುತೇಕ ನಾಯಕರು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ತಮ ವಿರುದ್ಧ ಸೆಟೆದು ನಿಂತ ಎಲ್ಲರ ಲೆಕ್ಕಗಳನ್ನು ಚುಕ್ತಾ ಮಾಡಿದ್ದೇವೆ ಎಂದು ಚನ್ನಪಟ್ಟಣ ವಿಧಾನ ಸಭೆ ಉಪಚುನಾವಣೆಯ ಬಳಿಕ ಖುದ್ದು ಡಿ.ಕೆ.ಶಿವಕುಮಾರ್ ಅವರೇ ಹೇಳಿಕೊಂಡಿದ್ದರು.
ಸಿದ್ದರಾಮಯ್ಯ ಅವರ ಪರಮ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಸಚಿವರಾದ ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಮತ್ತಿರರು ಹೈಕಮಾಂಡ್ ಎಂಬುದನ್ನು ಲೆಕ್ಕಿಸದೆ ಸಮಯ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಮುಂಚೂಣಿಯಲ್ಲಿದ್ದರು. ಜೊತೆಗೆ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ, ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷರು ಆಗಿರುವ ಬಿ.ಆರ್.ಪಾಟೀಲ್ ಮತ್ತಿತರರು ಸಿದ್ದರಾಮಯ್ಯ ಅವರ ಪರವಾಗಿ ಮತ್ತು ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ.
ಅವರನ್ನು ನಿಯಂತ್ರಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಲವು ಭಾರಿ ಎಚ್ಚರಿಕೆ ನೀಡಿದ್ದರೂ, ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ರಾಜಣ್ಣ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಒಂದು ಹಂತದಲ್ಲಿ ಮಾತಿನ ಯುದ್ಧವೇ ನಡೆದಿತ್ತು. ಆಗಲೂ ಸಿದ್ದರಾಮಯ್ಯ ಇದಕ್ಕೂ ತಮಗೂ ಸಂಬಂಧವಿಲ್ಲ ಅದೇನಿದ್ದರೂ ಅವರಿಬ್ಬರ ನಡುವಿನ ಚರ್ಚೆಗಳು ಎಂದು ಹೇಳಿ ಕೈತೊಳೆದುಕೊಂಡಿದ್ದರು.
ರಾಜಣ್ಣ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡಿದಾಗ ಡಿ.ಕೆ .ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ರಾಮನಗರದ ಇಕ್ಬಾಲ್ ಹುಸೇನ್ ಬಹಿರಂಗ ಹೇಳಿಕೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರು ಮುಲಾಜಿಲ್ಲದೆ ತಮ ಬೆಂಬಲಿಗರಿಗೆ ನೋಟಿಸ್ ನೀಡಿ, ಶಿಸ್ತಿನ ಪಾಠ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರ ಪಾಳೆಯದಲ್ಲಿ ಈ ರೀತಿಯ ಶಿಸ್ತಿನ ನಡುವಳಿಕೆಗಳು ಕಂಡು ಬರಲಿಲ್ಲ. ಬದಲಾಗಿ ಹೇಳಿಕೆಗಳ ಮೇಲೆ ಹೇಳಿಕೆಗಳು ಮುಂದುವರೆಯುತ್ತಲೇ ಇದ್ದವು. ಒಂದು ಹಂತದಲ್ಲಿ ನಮಗೆ ನಾವೇ ಹೈಕಮಾಂಡ್ ಎಂಬ ಮಟ್ಟದ ಉದ್ಧಟತನದ ವರ್ತನೆಗಳು ಕಂಡು ಬಂದಿದ್ದವು.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದವರೇ ಅದ ಮಲ್ಲಿಕಾರ್ಜುನ ಖರ್ಗೆ ಅವರಿದ್ದರೂ, ಶಿಸ್ತು ಪಾಲನೆ ಸರಿಯಾಗಿಲ್ಲ ಎಂಬ ಅಸಮಾಧಾನಗಳು ಕಾಂಗ್ರೆಸ್ ಪಕ್ಷದಲ್ಲಿ ಒಳಗೊಳಗೆ ಮಡುಗಟ್ಟಿದ್ದವು. ಸಿದ್ದರಾಮಯ್ಯ ಅತ್ಯುನ್ನತ ನಾಯಕರಾಗಿದ್ದಾರೆ. ಅವರ ಬೆಂಬಲಿಗರಾದರೆ ಏನೂ ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂಬ ಚರ್ಚೆಗಳು ಕಾಂಗ್ರೆಸ್ ಒಳ ವಲಯದಲ್ಲಿದ್ದವು.
ಕೆ.ಎನ್. ರಾಜಣ್ಣ ಸಹಕಾರ ಸಚಿವರಾಗಿದ್ದರು. ಅಪೆಕ್ಸ್ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರ ಒತ್ತಡಕ್ಕೆ ಕ್ಯಾರೆ ಎಂದಿರಲಿಲ್ಲ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ನಡೆಸಿದರು. ಅದಕ್ಕೆ ರಾಜಣ್ಣ ಅಡ್ಡಗಾಲಾಗಿದ್ದರು ಎನ್ನಲಾಗಿದೆ. ಎಲ್ಲಾ ಸಂದರ್ಭಗಳಲ್ಲೂ ಸಮಯ ಕಾಯುತ್ತಿದ್ದ ಡಿ.ಕೆ.ಶಿವಕುಮಾರ್, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ರಾಹುಲ್‌ಗಾಂಧಿ ವಿರುದ್ಧವಾಗಿ ಹೇಳಿಕೆ ನೀಡಿದ್ದನ್ನೇ ಬಳಸಿಕೊಂಡು ದಾಳ ಉರುಳಿಸಿದ್ದಾರೆ. ಈ ಮೂಲಕ ರಾಜಣ್ಣ ಅವರ ಪದಚ್ಯುತಿಯಾಗಿದ್ದು, ಒಂದೇ ಕಲ್ಲಿನಲ್ಲಿ ಡಿ.ಕೆ.ಶಿವಕುಮಾರ್ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸುವವರಿಗೆ ಛಡಿ ಏಟು ಬಿದ್ದಂತಾಗಿದ್ದು, ಕಾಂಗ್ರೆಸ್‌ನಲ್ಲಿ ಹೈಕಮಾಂಡೇ ಅಂತಿಮ ಎಂಬ ಸಂದೇಶದ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತು ಹದ್ದು ಮೀರಿದವರಿಗೆ ಗ್ರಹಾಚಾರ ತಪ್ಪಿದ್ದಲ್ಲ ಎಂಬ ಸಂದೇಶವು ರವಾನೆಯಾಗಿದೆ.
ಕೆ.ಎನ್.ರಾಜಣ್ಣ ತಮ ಸ್ನೇಹಿತರಾಗಿದ್ದು ಅವರಿಗೆ ಈ ರೀತಿಯಾಗಿರುವುದಕ್ಕೆ ತಮಗೆ ದುಃಖವಿದೆ ಎಂದು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯನ್ನು ಈ ವರ್ಷದ ಅತ್ಯುತ್ತಮ ಜೋಕ್ ಎಂದು ರಾಜಕೀಯ ವಲಯದಲ್ಲಿ ಹುಸಿ ನಗೆ ಕೇಳಿಬರುತ್ತಿವೆ.
Leave feedback about this