ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಸಿಎಂ ಖುರ್ಚಿಗಾಗಿ ಮುಸುಕಿನ ಗುದ್ದಾಟ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಂಚ ತಣ್ಣಗಾಗಿದ್ದ ಸಿಎಂ ಖುರ್ಚಿ ಶೀತಲ ಸಮರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆಯೇ ಡಿ.ಕೆ ಶಿವಕುಮಾರ್ ತಮ್ಮ ಸಿಎಂ ಆಸೆ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂಧನ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ”ಸುಮ್ಮನೆ ಎಲ್ಲರೂ ಡಿಕೆ ಡಿಕೆ ಎನ್ನುವುದಿಲ್ಲ, ನಾವು ನಿಮ್ಮ ಪರವಾಗಿ ಕೆಲಸ ಮಾಡಿದ್ದೇವೆ. ನೀವು ನಮ್ಮ ಉಪಕಾರ ಸ್ಮರಣೆ ಮಾಡಬೇಕು. ಇಲ್ಲಿಗೆ ಬಂದು ಜ್ಯೋತಿ ಬೆಳಗಿಸಿ ಹೋಗುವುದಲ್ಲ. ಮುಂದೆ ಡಿಕೆಯನ್ನು ಮತ್ತೆ ಅಧಿಕಾರಕ್ಕೆ ತರಬೇಕು, ಡಿಕೆ ಸರ್ಕಾರ ತರಬೇಕು” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಮುಂದೆಯೇ ಹೇಳಿದ್ದಾರೆ.
ಅಬ್ಬರದ ಭಾಷಣದ ವೇಳೆ ಡಿಕೆ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಮುಖ್ಯಮಂತ್ರಿ ಭಯಕೆಯನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದಾರೆ.