ಮಂಗಳೂರು:- ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಇದೀಗ ಕೈಕೊಟ್ಟು ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಮಗುವಿನ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ಇದೀಗ ಮಗಳಿಗೆ ನ್ಯಾಯ ಕೊಡಿಸಲು ಮಾಧ್ಯಮಗಳ ಮುಂದೆ ಬಂದಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆಯ ತಾಯಿ, ನನ್ನ ಮಗಳು ಮತ್ತು ಆರೋಪಿ ಕೃಷ್ಣ.ಜೆ.ರಾವ್ ಫ್ರೌಢಶಾಲೆಯಲ್ಲಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕದ ದಿನಗಳಲ್ಲಿಯೂ ಈ ಪ್ರೀತಿ ಮುಂದುವರಿದು ದೈಹಿಕ ಸಂಪರ್ಕದ ವರೆಗೂ ಸಾಗಿದೆ. ಆದರೆ, ಮಗಳಿಗೆ ಗರ್ಭಿಣಿಯಾಗಿ ಏಳು ತಿಂಗಳ ಬಳಿಕ ನಮಗೆ ವಿಚಾರ ತಿಳಿದಿದೆ ಎಂದರು. ಈ ವೇಳೆ ನಾನು ಯುವಕನ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರ ಬಳಿ ಪ್ರಶ್ನಿಸಿದ್ದೇವೆ. ಅವರು ಅವತ್ತೇ ಇಬ್ಬರನ್ನೂ ಮದುವೆ ಮಾಡುವ ಭರವಸೆಯನ್ನು ನೀಡಿದ್ದರು. ಈ ವೇಳೆ ಆರೋಪಿ ಕೃಷ್ಣ.ಜೆ.ರಾವ್ ನನಗೆ ಕಾಲ್ ಮಾಡಿ ಮಗಳನ್ನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ. ಒತ್ತಾಯ ಮಾಡಿದಲ್ಲಿ ನಾನು ಆತ್ಮಹತ್ಯೆ ಮಾಡುವುದಾಗಿಯೂ ಹೇಳಿ ಬೆದರಿಕೆ ಹಾಕಿದ್ದ. ಈ ಹಿನ್ನಲೆ ನಾವು ಆತನ ವಿರುದ್ಧ ದೂರು ನೀಡಲು ಪುತ್ತೂರು ಮಹಿಳಾ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಕೂಡಾ ಠಾಣೆಗೆ ಬಂದಿದ್ದರು. ಆರೋಪಿಯ ತಂದೆ ಠಾಣೆಯಿಂದ ಶಾಸಕ ಅಶೋಕ್ ಕುಮಾರ್ ರೈ ಗೆ ಕಾಲ್ ಮಾಡಿದ್ದಾರೆ. ಬಳಿಕ ಶಾಸಕರು ನನ್ನ ಬಳಿ ಮಾತನಾಡಿದ್ದಾರೆ. ಕೇಸು ಹಿಂಪಡೆಯಿರಿ, ಹುಡುಗನ ಭವಿಷ್ಯದ ಪ್ರಶ್ನೆ ಎಂದು ಹೇಳಿದ್ದರು. ಇಬ್ಬರನ್ನೂ ಮದುವೆ ಮಾಡಿಸಿ ಕೊಡುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದರು.
ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ. ಜೂನ್ 23 ಕ್ಕೆ ಆರೋಪಿಗೆ 21 ವರ್ಷ ತುಂಬಿತ್ತು. ಜೂನ್ 22 ರಂದು ಆರೋಪಿ ನನಗೆ ಕಾಲ್ ಮಾಡಿ ನಿಮ್ಮ ಮಗಳನ್ನು ನಾನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ. ಅಲ್ಲದೆ ಆತನ ತಾಯಿ ನಿಮ್ಮ ಮಗಳನ್ನು ಆತನಿಗೆ ಮದುವೆ ಮಾಡುವ ಸಾಧ್ಯತೆಯೂ ಇಲ್ಲ ಎಂದು ಹೇಳಿ ಮಗುವನ್ನು ಅಬೋರ್ಷನ್ ಮಾಡಿ ತೆಗಿಸಿ, ಅದಕ್ಕೆ ಬೇಕಾದ ಹಣವನ್ನು ಕೊಡುತ್ತೇವೆ ಎಂದು ಆರೋಪಿಯ ತಂದೆ ನಮಗೆ ಹೇಳಿದ್ದಾರೆ. ಆದರೆ, ನಾವು ಅದಕ್ಕೆ ಒಪ್ಪಿಲ್ಲ, ಮಗು ಆರೋಪಿ ಕೃಷ್ಣ.ಜೆ.ರಾವ್ ನದ್ದೇ ಎನ್ನುವುದಕ್ಕೆ ಎಲ್ಲಾ ಪುರಾವೆಗಳೂ ಇವೆ. ನಾವು ಮೊದಲಿನಿಂದಲೇ ಮಗುವಿನ ಡಿ.ಎನ್.ಎ ಪರೀಕ್ಷೆ ಮಾಡಲು ಸಿದ್ಧರಿದ್ದೇವೆ, ಮಗುವಿಗೆ ಮೂರು ತಿಂಗಳು ಕಳೆದ ಬಳಿಕ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಮೊದಲು ಶಾಸಕ ಅಶೋಕ್ ಕುಮಾರ್ ರೈ ದೂರು ನೀಡಲು ಹೋದಾಗ ತಡೆದಿದ್ದರು. ಆದರೆ, ಈಗ ನೀವು ದೂರು ನೀಡಿ ಎಂದು ಹೇಳಿದ್ದಾರೆ. ಇನ್ನು ಆರೋಪಿ ನಾಪತ್ತೆಯಾಗಿ 5 ದಿನ ಕಳೆದರೂ ಪೊಲೀಸರು ಆತನನ್ನು ಬಂಧಿಸಿಲ್ಲ. ಎಸ್ಪಿಯನ್ನೂ ಭೇಟಿ ಮಾಡಿ ನಮಗಾಗ ಅನ್ಯಾಯದ ಬಗ್ಗೆ ತಿಳಿಸಿದ್ದೇವೆ. ಆದರೆ, ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಸೈಲೆಂಟ್ ಆಗಿದೆ ಎಂದು ಅನಿಸುತ್ತಾ ಇದೆ ಎಂದರು. ಹಿಂದೂ ಪರ ಸಂಘಟನೆಗಳ ಮೊರೆ ಹೋಗಿದ್ದೇವೆ, ಆದರೆ, ಅವರಾರು ಕೂಡಾ ನಮಗೆ ಸರಿಯಾಗಿ ಸ್ಪಂದಿಸಿಲ್ಲ, ಬೆಲೆ ಕೋಮಿನ ಯುವತಿಯಾಗಿದ್ದರೆ. ಇಷ್ಟು ಹೊತ್ತಿಗೆ ಮದುವೆ ಮಾಡಿಸುತ್ತಿದ್ದರು. ಆದರೆ, ಈಗ ಅವರು ಸುಮ್ಮನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.