ಚಿಕ್ಕಮಗಳೂರು:- ಜನಗಣತಿ 2026ರ ಏಪ್ರಿಲ್ 1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕಿಂತ 3 ತಿಂಗಳ ಮೊದಲೇ ಜಿಲ್ಲೆ, ಉಪಜಿಲ್ಲೆ, ತಾಲೂಕು, ತೆಹಸಿಲ್, ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಹೊಸ ಜಿಲ್ಲೆ/ತಾಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಡಿ.31ರ ಒಳಗೆ ಮುಗಿಸಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.
ಇದರಿಂದಾಗಿ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವುದಿದ್ದರೆ ಡಿ.31ರೊಳಗೆ ಮಾಡಬೇಕು. ನಂತರ ಯಾವುದೇ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವಂತಿಲ್ಲ ಎಂದು ಕೇಂದ್ರ ಸೂಚಿಸಿದಂತಾಗಿದೆ. ಗಣತಿ ಪ್ರಕ್ರಿಯೆ ಮುಗಿವವರೆಗೆ ಈ ಸೂಚನೆ ಇದು ಜಾರಿಯಲ್ಲಿರುತ್ತದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯನ್ನು 3 ಭಾಗ ಹಾಗೂ ಬೆಳಗಾವಿಯನ್ನು 2 ಭಾಗ ಮಾಡಬೇಕು ಎಂಬ ಬೇಡಿಕೆ ಇರುವ ನಡುವೆಯೇ ಕೇಂದ್ರ ಸರ್ಕಾರದ ಈ ಸೂಚನೆ ಮಹತ್ವ ಪಡೆದಿದೆ.