ಚಿಕ್ಕಮಗಳೂರು:- ಪ್ರತಿ ವರ್ಷವೂ ಕೂಡ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಜಾತ್ರಾ ಕಾರ್ಯಕ್ರಮ, ಮಕರ ಸಂಕ್ರಾಂತಿ ವಿಶೇಷ ಪೂಜಾ ಕಾರ್ಯಕ್ರಮ, ಹಾಗೂ ಪ್ರತಿಷ್ಠಾಪನ ವರ್ಷದ ವರ್ಧನ್ತ್ಯೋತ್ಸವ ಕಾರ್ಯಕ್ರಮಗಳು ವಿಶೇಷವಾಗಿ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿವೆ. ಈ ಭಾಗದ ಎಲ್ಲಾ ಗ್ರಾಮಸ್ಥರ ಭಕ್ತಾದಿಗಳ ಸಹಕಾರ ಹೆಚ್ಚಿನದಾಗಿದೆ. ಅಲ್ಲದೆ ದೇವಾಲಯದ ಇತರೆ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಗ್ರಾಮಸ್ಥರು ಕೈಗೂಡಿಸಿ ಸಹಕಾರ ನೀಡುತ್ತಿದ್ದಾರೆ ಎಂದು ಅಯ್ಯಪ್ಪ ಸ್ವಾಮಿಯ ಭಜನಾ ಸಂಘದ ಅಧ್ಯಕ್ಷ ಗಾಂಧಿ ಗ್ರಾಮದ ಕೆ.ಎನ್ ನಾಗರಾಜ್ ರವರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡುಹಿನಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಕೊಪ್ಪದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪನ ಮಹೋತ್ಸವದ 7ನೇ ವರ್ಷದ ವರ್ಧಂತ್ಯೋತ್ಸವದಲ್ಲಿ ಹೋಮ ಹವನ ಪೂಜೆಯಲ್ಲಿ ಕಳೆದ ಬುಧವಾರ ಪಾಲ್ಗೊಂಡು ಮಾತನಾಡಿದರು.
ಹೋಮ ಹವನ ಪೂಜಾಧಿಗಳು ದೇವರ ಸಾನಿಧ್ಯದಲ್ಲಿ ನಡೆದರೆ ದೇವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ ಎಂದು ನರಸಿಂಹರಾಜಪುರದ ಪ್ರಧಾನ ಪುರೋಹಿತರಾದ ಜಗದೀಶ್ ಭಟ್ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ, ಭಕ್ತರಿಗೆ ಹಿತವಚನ ನೀಡಿದ ಅವರು ಪೂಜಾ ಮಂದಿರಗಳು ಮನುಷ್ಯನ ಶ್ರದ್ದೆಯ ನೆಮ್ಮದಿ ಕೇಂದ್ರಗಳಾಗಿವೆ. ನಾವು ದೇವರ ನಾಮಸ್ಮರಣೆ ಪ್ರತಿನಿತ್ಯವೂ ಮಾಡುವುದರಿಂದ ಮನುಷ್ಯನ ಕಷ್ಟಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗಲಿವೆ, ದೈವಗಳ ಶಕ್ತಿಗಳಲ್ಲಿ ಪ್ರತಿಯೊಬ್ಬರೂ ನಂಬಿಕೆ ಇಡಬೇಕು, ದೇವರು ಎನ್ನುವ ಭಯ-ಭಕ್ತಿ ಇದ್ದಾಗ ಮನುಷ್ಯ ತಪ್ಪು ಮಾಡುವುದನ್ನ ಕಡಿಮೆ ಮಾಡುತ್ತಾ ಸನ್ಮಾರ್ಗದಲ್ಲಿ ನಡೆಯುತ್ತಾನೆ, ಸನ್ಮಾರ್ಗದಲ್ಲಿ ನಡೆಯುವ ವ್ಯಕ್ತಿಗೆ ದೇವರು ಸಕಲವನ್ನು ಕರುಣಿಸುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿಗೆ ಕಲಾಹೋಮ, ಕಳಸಾಭಿಷೇಕ, ಕುಂಭಾಭಿಷೇಕ, ಅನ್ನ ಸಂತರ್ಪಣ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿಯ ಭಜನಾ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಮಣಿಕಂಠ ಮಹಿಳಾ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.