ಬೆಂಗಳೂರು

ಚಿತ್ರರಂಗದ ಕೆಲವರು ಚಿಲ್ಲರೆ ಹೇಳಿಕೆ ನೀಡುತ್ತಿದ್ದಾರೆ.- ಡಿಕೆಶಿ

ಬೆಂಗಳೂರು:- ಚಿತ್ರರಂಗದ ಕೆಲವರು ಚಿಲ್ಲರೆ ಹೇಳಿಕೆ ನೀಡುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಡಾ.ರಾಜ್​ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ,
ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಗೌರವ ಬಂದಿದೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಮಧ್ಯದಲ್ಲಿ ಕೆಲವರು ಚಿಲ್ಲರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚಿತ್ರರಂಗದಲ್ಲಿ ಇಲ್ಲದವರು, ನಿವೃತ್ತಿ ಹೊಂದಿದವರೆಲ್ಲ ಮಾತನಾಡಲು ಶುರು ಮಾಡಿದ್ದಾರೆ. ಮಾತನಾಡುವವರೆಲ್ಲ ಮೊದಲು ಚಿತ್ರರಂಗವನ್ನು ಉಳಿಸಿ. ಚಿತ್ರಮಂದಿರಗಳನ್ನು ಕಟ್ಟಿ. ಹೊಸ ಸಿನಿಮಾ ಮಾಡಿ, ನಿರ್ದೇಶನ ಮಾಡಿ ಎಂದರು.

ನಿರ್ಮಾಣ ಮಾಡಿದಾಗ ಚಲನಚಿತ್ರದ ಬೆಲೆ ಗೊತ್ತಾಗುತ್ತದೆ, ಅಂದಿನ ಚಿತ್ರರಂಗಕ್ಕೂ ಇಂದಿಗೂ ಬಹಳ ವ್ಯತ್ಯಾಸವಿದೆ. ಸರ್ಕಾರ ಚಿತ್ರರಂಗಕ್ಕೆ ಅಗತ್ಯ ಎಲ್ಲ ಸವಲತ್ತು ನೀಡಲು ಬದ್ಧವಾಗಿದೆ. ಸ್ಯಾಂಡಲ್‌ವುಡ್‌ಗೆ ಹೊಸ ಕಿರೀಟ ನೀಡಬೇಕೆಂಬ ಆಲೋಚನೆಯಿದೆ. ಅದಕ್ಕೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ. ಬ್ರ್ಯಾಂಡ್‌ ಬೆಂಗಳೂರಿಗಾಗಿ, ಚಿತ್ರರಂಗಕ್ಕೆ ಹೊಸ ರೂಪ ಕೊಡಲು ಕೆಲಸ ಮಾಡಿ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.