Uncategorized

ಕೊಲ್ಲಲ್ಪಟ್ಟ ಅಶ್ರಫ್ ಮಾನಸಿಕ ವ್ಯಕ್ತಿ.- ಸಹೋದರ ಜಬ್ಬಾರ್

ಮಂಗಳೂರು:- ಕುಡುಪು ಬಳಿ ಕೊಲ್ಲಲ್ಪಟ್ಟ ಅಶ್ರಫ್ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡವರು, ಅವರಿಗೆ ನಾವು ಚಿಕಿತ್ಸೆ ನೀಡಿದ್ದೆವಾದರೂ ಆರೋಗ್ಯ ಸುಧಾರಣೆ ಕಾಣಲಿಲ್ಲ ಎಂದು ಸಹೋದರ ಅಬ್ದುಲ್ ಜಬ್ಬಾರ್ ಪತ್ರಿಕೆಗೆ ಹೇಳಿಕೆಯೊಂದನ್ನು ನೀಡಿದ್ದಾರೆ.
ಕುಡುಪು ಬಳಿ ಕೊಲೆಯಾದ ವ್ಯಕ್ತಿಗೂ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಭಾವಚಿತ್ರಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರೊಂದಿಗೆ ಮಂಗಳೂರಿಗೆ ಆಗಮಿಸಿರುವ ಅಬ್ದುಲ್ ಜಬ್ಬಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ನಾನು ಎರ್ನಾಕುಲಂ ನಲ್ಲಿ ಇರುವುದು, ಅಲ್ಲಿಗೆ ಅಣ್ಣ ಕೆಲವೊಮ್ಮೆ ಬರುತ್ತಿದ್ದ. ಬಂದಾಗ ಬಟ್ಟೆ, ಮೊಬೈಲ್ ಕೊಡುತ್ತಿದ್ದೆ. ಅದನ್ನು ಎಲ್ಲೆಲ್ಲೋ ಬಿಟ್ಟು ಬರುತ್ತಿದ್ದ. ನನ್ನ ಹೆಸರಿನಲ್ಲೇ ನಾನು ಅವನಿಗೆ ಸಿಮ್ ತೆಗೆದು ಕೊಟ್ಟಿದ್ದೆ. ಇತ್ತೀಚೆಗೆ ನನ್ನ ಬಳಿ ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದ. ವಯನಾಡಿನಲ್ಲಿರುವ ನಮ್ಮ ಮನೆಗೆ ಅಮ್ಮನನ್ನು ನೋಡಲು ಬರುತ್ತಿದ್ದ. ಕಳೆದ ಈದುಲ್ ಫಿತ್ರ್ ಗೆ ಮನೆಗೆ ಬಂದಿದ್ದ. ಹಲವು ವರ್ಷಗಳಿಂದ ಮಂಗಳೂರಿನಲ್ಲೇ ವಾಸ ಮಾಡುತ್ತಿದ್ದ ಎಂದು ಜಬ್ಬಾರ್ ಮಾಹಿತಿ ನೀಡಿದ್ದಾರೆ.

ಪೊಲೀಸರು ಈಗಾಗಲೇ 20 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಮಾನಸಿಕ ಸಮಸ್ಯೆ ಇದ್ದ ನನ್ನ ಸಹೋದರನಿಗೆ ಈಗ ಈ ಸ್ಥಿತಿ ಬಂದಿದೆ, ಪ್ರಕರಣದ ತನಿಖೆಗೆ ನಾವು ಪೊಲೀಸರೊಂದಿಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತೇವೆ ಎಂದು ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.