ಮಂಗಳೂರು:- ಸುಹಾಸ್ ಹತ್ಯೆಯ ಹಿನ್ನೆಲೆ ಗೃಹ ಸಚಿವರು ಸೇರಿದಂತೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನಗರಕ್ಕೆ ಆಗಮಿಸಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಆರಂಭಿಸಿದ್ದಾರೆ. ಜಿ.ಪರಮೇಶ್ವರ ಮಾತನಾಡಿ, ಕರಾವಳಿ ಭಾಗದ ಪ್ರತಿಯೊಂದು ಸಣ್ಣ ಘಟನೆಗೂ ಕೋಮು ಬಣ್ಣ ದೊರೆಯುತ್ತಿದೆ. ರಾಜ್ಯದ ಯಾವ ಭಾಗದಲ್ಲೂ ಈ ರೀತಿಯ ಸೂಕ್ಷ್ಮ ವಾತಾವರಣ ಇಲ್ಲ. ಇನ್ನೂ ಮುಂದೆ ಕೋಮುವಾದ ಹಾಗೂ ಮೂಲಭೂತವಾದ ಎರಡನ್ನೂ ಕಟ್ಟುನಿಟ್ಟಾಗಿ ಎಡೆಮುರಿ ಕಟ್ಟಬೇಕು. ಎಷ್ಟೇ ಪ್ರಬಲಶಾಲಿಗಳಾಗಿದ್ದರೂ ಮುಲ್ಲಾಜಿಲ್ಲದೆ ಕಾನೂನಿನ ಸಂಕೋಲೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರು ಐದು ತಂಡಗಳನ್ನು ರಚಿಸಿದ್ದರು. ಈ ತಂಡಗಳು ಘಟನೆ ನಡೆದ ದಿನದಿಂದ ಇದುವರೆಗೂ ಹಲವು ಮಾತಿಗಳನ್ನು ಕಲೆಹಾಕಿ ಮಂಗಳೂರಿನಲ್ಲೇ ಅವಿತು ಕುಳಿತಿದ್ದ ಎಂಟು ಮಂದಿ ಶಂಕಿತರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿವೆ.
ಸುಹಾಸ್ ಶೆಟ್ಟಿಯನ್ನು ಏತಕ್ಕಾಗಿ ಕೊಲೆ ಮಾಡಿದ್ದಾರೆ, ಈ ಘಟನೆ ಹಿಂದೆ ಯಾರಿದ್ದಾರೆ, ಎಂಬಿತ್ಯಾದಿ ಮಾಹಿತಿಗಳನ್ನು ಆರೋಪಿಗಳಿಂದ ಬಾಯ್ದಿಡಿಸುತ್ತಿದ್ದಾರೆ. 2022 ರಲ್ಲಿ ನಡೆದಿದ್ದ ಫಾಜಿಲ್ ಕೊಲೆಗೆ ಪ್ರತಿಕಾರವಾಗಿ ಸುಹಾಸ್ ಕೊಲೆ ನಡೆಯಿತೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ತನಿಖೆ ನಂತರವಷ್ಟೇ ಈತನ ಕೊಲೆಗೆ ನಿಖರ ಕಾರಣ ಬಯಲಾಗಬೇಕಿದೆ.
ಇದಲ್ಲದೇ ಸುಹಾಸ್ ಹತ್ಯೆ ನಡೆದ ಕೆಲವೇ ನಿಮಿಷಗಳಲ್ಲಿ ಫಿನೀಶ್ ಎಂಬ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಏಕೆ ಹಾಕಲಾಗಿತ್ತು, ಈ ಪೋಸ್ಟರ್ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆಯೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಮೀನಿನ ಗೂಡ್ಸ್ ವಾಹನದಿಂದ ಗುದ್ದಿಸಿ ನಂತರ ನಡು ರಸ್ತೆಯಲ್ಲೇ ಹಂತಕರ ಗುಂಪು ತಲ್ವಾರ್ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ಸಿಸಿ ಟಿವಿಯ ಪುಟೇಜ್ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸುಹಾಸ್ ಬರ್ಬರ ಹತ್ಯೆ ನಡೆಸಿದ್ದ ಪ್ರಮುಖ ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲದಲ್ಲಿ ಪ್ರತ್ಯೇಕ ಇರಿತ ಪ್ರಕರಣಗಳು ನಡೆದಿವೆ. ಇನ್ನು ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ಕೂಡಾ ಆಟೋ ಚಾಲಕನ ಮೇಲೆ ದುಷ್ಕರ್ಮಿಗಳಿಂದ ಮಾರಕಾಯುಧಗಳಲ್ಲಿ ಹಲ್ಲೆಗೆ ಯತ್ನ ನಡೆದಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಕಟ್ಟೆಚ್ಚರ ವಹಿಸಿದ್ದು, ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.