Uncategorized

ಮೋಹನ್‌ಲಾಲರ ತುಡರುಮ್ ಚಿತ್ರ ಕನ್ನಡಕ್ಕೆ ರಿಮೇಕ್

ಕೊಚ್ಚಿ:- ಲೂಸಿಫರ್ 2 ಮೂಡ್‌ನಲ್ಲಿ ಇದ್ದ ಸಿನಿಪ್ರೇಮಿಗಳಿಗೆ ಮತ್ತೊಂದು ಸಿನಿಮಾ ಕೊಟ್ಟಿದ್ದರು ಮೋಹನ್‌ಲಾಲ್‌. ಅದುವೇ ”ತುಡರುಮ್” ಈಗ ಎಲ್ಲಾ ಕಡೆ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ.

ಮೋಹನ್‌ಲಾಲ್ ಎರಡು ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ದಾಖಲಿಸಿದ್ದಾರೆ. ಅದರಲ್ಲೂ ‘ತುಡರುಮ್’ ಬೆಂಗಳೂರಿನಂತಹ ನಗರದ ಹಲವು ಚಿತ್ರಮಂದಿರದಲ್ಲಿ ಹೌಸ್‌ಪುಲ್ ಪ್ರದರ್ಶನ ಕಂಡಿತ್ತು. ಕರ್ನಾಟಕದ ವಿತರಕರೊಬ್ಬರ ಪ್ರಕಾರ ಈ ಮಲಯಾಳಂ ಸಿನಿಮಾದಿಂದ ಮೂರೂವರೆ ಕೋಟಿಗೂ ಅಧಿಕ ಶೇರ್ ಬಂದಿದೆ. ಕನ್ನಡ ಸಿನಿಮಾಗಳೇ ಇಷ್ಟೊಂದು ಶೇರ್ ಎತ್ತುವುದಕ್ಕೆ ಪರದಾಡುತ್ತಿರುವ ಕಾಲದಲ್ಲಿ ಮೋಹನ್‌ಲಾಲ್ ಸಿನಿಮಾ ನಮ್ಮ ರಾಜ್ಯದಲ್ಲಿ ದಾಖಲೆ ಬರೆದಿದೆ.

ಇದು ಹೇಗೆ ಸಾಧ್ಯ ಆಯ್ತು ಅಂತ ಪ್ರಶ್ನೆ ಹೇಳಿದರೆ, ಅದಕ್ಕೆ ಕಾರಣ ಒಂದೇ ಕಂಟೆಂಟ್. ಈ ಹಿಂದೆ ಮೋಹನ್‌ಲಾಲ್ ಇಂತಹ ಹಲವು ಸಿನಿಮಾಗಳನ್ನು ಒಳ್ಳೊಳ್ಳೆ ಕಂಟೆಂಟ್‌ ಅನ್ನು ಆಯ್ಕೆ ಮಾಡಿಕೊಂಡು ಗೆದ್ದಿದ್ದಾರೆ. ಆ ಸಾಲಿಗೆ ಸೇರುವ ಸಿನಿಮಾ ‘ದೃಶ್ಯಂ’ ಹಾಗೂ ‘ದೃಶ್ಯಂ 2’. ಇನ್ನು ‘ತುಡರುಮ್’ ಕೂಡ ಹೆಚ್ಚು ಕಡಿಮೆ ಇದೇ ಶೈಲಿಯ ಸಿನಿಮಾ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ‘ತುಡರುಮ್’ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಬಹುದೇ? ಅದನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾಡುತ್ತಾರೆ ಎಂದೆಲ್ಲ ಸುದ್ದಿಗಳು ಓಡಾಡುತ್ತಿದೆ.

‘ತುಡರುಮ್’ ಕ್ರೈಂ, ಫ್ಯಾಮಿಲಿ, ಥ್ರಿಲ್ಲರ್ ಸಿನಿಮಾ. ಈ ಎಲಿಮೆಂಟ್‌ಗಳನ್ನು ಇಟ್ಟುಕೊಂಡು ತರುಣ್ ಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಎಲ್ಲಾ ಕಡೆಗೂ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೋಹನ್‌ಲಾಲ್ ಅವರ ‘ದೃಶ್ಯಂ’ ಸಿನಿಮಾಗೂ ‘ತುಡರುಮ್’ ಸಿನಿಮಾಗೂ ಹೋಲಿಕೆ ಮಾಡಲಾಗುತ್ತಿದೆ. ಎರಡೂ ಸಿನಿಮಾಗಳಲ್ಲಿ ಇರುವ ಕೆಲವು ಸಾಮ್ಯತೆಗಳನ್ನು ಪಟ್ಟಿ ಮಾಡಿದ್ದೂ ಇದೆ. ‘ದೃಶ್ಯಂ’ ಹುಟ್ಟಾಕಿದ ಕ್ರೇಜ್ ಅನ್ನು ತಲುಪದೇ ಹೋದರೂ, ದಕ್ಷಿಣ ಭಾರತದಲ್ಲಿ ‘ತುಡರುಮ್’ ಅನ್ನು ಮೆಚ್ಚಿಕೊಂಡಿದ್ದಾರೆ.

ಮೋಹನ್‌ಲಾಲ್ ನಟಿಸಿದ ಇಂತಹ ವಿಶಿಷ್ಟ ಸಿನಿಮಾಗಳನ್ನು ಕನ್ನಡದಲ್ಲಿ ರವಿಚಂದ್ರನ್ ರಿಮೇಕ್ ಮಾಡುತ್ತಿದ್ದರು. ‘ದೃಶ್ಯಂ’ ಎರಡೂ ಚಾಪ್ಟರ್‌ಗಳಲ್ಲಿ ರವಿಚಂದ್ರನ್ ನಟಿಸಿದ್ದರು. ಕನ್ನಡದಲ್ಲೂ ಆ ಎರಡೂ ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿತ್ತು. ನಿರ್ಮಾಕರಿಗೆ ಈ ಸಿನಿಮಾ ಎಲ್ಲಾ ಸೇರಿ, 10 ರಿಂದ 11 ಕೋಟಿ ರೂಪಾಯಿವರೆಗೂ ಬ್ಯೂಸಿನೆಸ್ ಆಗಿರಬಹುದು ಎಂದು ವಿತರಕರು ಹೇಳುತ್ತಾರೆ. ಇನ್ನೊಂದು ಕಡೆ ಮೋಹನ್‌ಲಾಲ್ ಸಿನಿಮಾಗಳು ರವಿಚಂದ್ರನ್‌ಗೆ ಒಪ್ಪುತ್ತವೆ. ಈ ಕಾರಣಕ್ಕೆ ‘ತುಡರುಮ್’ ಸಿನಿಮಾವನ್ನು ರಿಮೇಕ್ ಮಾಡಬಹುದು ಎಂದು ಕನ್ನಡದ ವಿತರಕರೊಬ್ಬರು ಅಭಿಪ್ರಾಯಪಡುತ್ತಾರೆ.

ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ‘ತುಡರುಮ್’ ನೋಡಿ ಬಂದಿದ್ದಾರೆ. ಈ ಫ್ಯಾಮಿಲಿ ಕ್ರೈಂ ಥ್ರಿಲ್ಲರ್ ಸಿನಿಮಾ ಕ್ರೇಜಿಸ್ಟಾರ್‌ಗೆ ಇಷ್ಟ ಆಗಿದೆ ಅನ್ನೋದು ಗಾಂಧಿ ನಗರದಲ್ಲಿ ಓಡಾಡುತ್ತಿರುವ ಸುದ್ದಿ. ಅಲ್ಲದೇ ‘ತುಡರುಮ್’ ಸಿನಿಮಾ ಬಗ್ಗೆ ರವಿಚಂದ್ರನ್ ವಿಚಾರಣೆ ಮಾಡುತ್ತಿರುವುದನ್ನು ನೋಡಿ, ಶೀಘ್ರದಲ್ಲಿಯೇ ಅನೌನ್ಸ್ ಮಾಡಿದರೂ ಅಚ್ಚರಿ ಪಡೆಬೇಕಿಲ್ಲ ಎಂಬ ಸುದ್ದಿನೂ ಒಡಾಡುತ್ತಿದೆ. ನಿರ್ಮಾಪಕರು ಸಿಕ್ಕರೆ, ‘ತುಡರುಮ್’ ರಿಮೇಕ್ ಮಾಡಿ ಕನ್ನಡದಲ್ಲೇ ತೋರಿಸಬಹುದೇನೋ. ಇದು ಗಾಂಧಿನಗರದಲ್ಲಿ ಆಗುತ್ತಿರುವ ಚರ್ಚೆಯಷ್ಟೇ. ಅಧಿಕೃತ ಮಾಹಿತಿ ಇನ್ನೂ ಬರಬೇಕಾಗಿದೆ.