ಬೆಂಗಳೂರು:- ಸೂಸೈಡ್ ಬಾಂಬರ್ ಆಗಿ ಬಾರ್ಡರ್ ಗೆ ಹೋಗ್ತೀನಿ ಎಂದವ್ರು ಬೆಂಗಳೂರಿನ ತಿರಂಗಾ ಯಾತ್ರೆಗೆ ಬರಲಿಲ್ಲ ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ವ್ಯಕ್ತವಾಗುತ್ತಿದೆ.
ಸಚಿವ ಜಮೀರ್ ಅಹಮ್ಮದ್ ಖಾನ್ ಭಾರತೀಯ ಸೇನೆಗೆ ಬಲ ತುಂಬುವ ಕಾರ್ಯಕ್ಕೆ ಕೈ ಜೋಡಿಸದ ಹಿನ್ನೆಲೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸೂಸೈಡ್ ಬ್ಯಾಗ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಜಮೀರ್ ಹೇಳಿಕೆ ನೀಡಿದ್ದರು. ಆದರೆ, ಇಂದು ಬೆಂಗಳೂರಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ಸಚಿವ ಜಮೀರ್ ಭಾಗಿಯಾಗಲಿಲ್ಲ. ಜಮೀರ್ ಅಹಮದ್ ಅಲ್ಲದೇ ಸಚಿವ ರಹೀಂ ಖಾನ್ ಗೂಡ ಗೈರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಬಹುತೇಕ ಕಾಂಗ್ರೆಸ್ ನ ಎಲ್ಲರೂ ಭಾಗವಹಿಸಿದ್ದಾರೆ. ಜಮೀರ್ ಅಹಮದ್ ಗೈರಿಗೆ ಈಗ ಕಾಂಗ್ರೆಸ್ನಲ್ಲೇ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಹೋಗುತ್ತೇನೆ, ದೇಶಕ್ಕಾಗಿ ನಾನು ಹುತಾತ್ಮನಾಗಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಎರಡು ಬಾರಿ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇದೆ ಜೊತೆಗೆ ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದಿದ್ದರು.