Uncategorized ಬೆಂಗಳೂರು

ಆಂಧ್ರಕ್ಕೆ ನಾಲ್ಕು ಆನೆ ಹಸ್ತಾಂತರ ಮಾಡಿದ ಸಿಎಂ

ಬೆಂಗಳೂರು:- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ನಟ ಪವನ್ ಕಲ್ಯಾಣ್ ಅವರಿಗೆ ನಾಲ್ಕು ಆನೆಗಳನ್ನು ಹಸ್ತಾಂತರ ಮಾಡಿದರು. ಈ ವೇಳೆ ರಾಜ್ಯದಿಂದ ಆಂಧ್ರಪ್ರದೇಶ ರಾಜ್ಯಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3,695 ಆನೆಗಳು ನಮ್ಮಲ್ಲಿವೆ. ಮಾನವ – ಆನೆ ಸಂಘರ್ಷ ತಡೆಗಟ್ಟಲು ಅಕ್ಕಪಕ್ಕದ ರಾಜ್ಯಗಳ ಸಹಕಾರವೂ ಅಗತ್ಯ. ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ‌. ಜಾರ್ಜ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಹಾಜರಿದ್ದರು.

ಪ್ರಸ್ತುತ ಆಂಧ್ರಪ್ರದೇಶಕ್ಕೆ ರಾಜ್ಯ ಸರ್ಕಾರ ನಾಲ್ಕು ಆನೆಗಳನ್ನು ಹಸ್ತಾಂತರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೆರಡು ಆನೆಗಳನ್ನು ಹಸ್ತಾಂತರಿಸಲಿದೆ ಎಂದು ತಿಳಿದು ಬಂದಿದೆ.