ಬೆಂಗಳೂರು:- ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಲು ನಿರಕ್ಷೇಪಣಾ ಪತ್ರ ಕೋರಿ, ಭಾರತ ಸರ್ಕಾರದ ಗೃಹ ಮಂತ್ರಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮಂತ್ರಾಲಯವು ತಿರಸ್ಕರಿಸಿದೆ. ಆದರೆ, ಭಾರತ ಸಂವಿಧಾನದ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. ರಾಜ್ಯಪಟ್ಟಿಯ ಸಂಖ್ಯೆ 18ರಲ್ಲಿ ಬರುವ ಭೂಮಿ ವಿಷಯವು ರಾಜ್ಯ ವಿಷಯವಾಗಿದೆ ಹಾಗೂ ರಾಜ್ಯ ಪಟ್ಟಿಯ ವಿಷಯ ಸಂಖ್ಯೆ 45 ರಲ್ಲಿ ಭೂ ಕಂದಾಯ ವಿಷಯವು ಸಹ ರಾಜ್ಯ ವಿಷಯವಾಗಿರುತ್ತದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯ ಸರ್ಕಾರಕ್ಕೆ ವಲಯಗಳನ್ನು ತಾಲ್ಲೂಕುಗಳನ್ನು, ಜಿಲ್ಲೆಗಳನ್ನು ರಚಿಸಲು, ಬದಲಾಯಿಸಲು, ರದ್ದುಪಡಿಸಲು ಹಾಗೂ ಹೆಸರನ್ನು ಮರುನಾಮಕರಣ ಮಾಡಲು ಅವಕಾಶ ಕಲ್ಪಿಸಿದೆ. ಆದ್ದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು.