ಬೆಂಗಳೂರು:- ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಡಿಸಿ, ಎಸ್ಪಿ ಮತ್ತು ಸಿಇಒಗಳ ಸಭೆಯಲ್ಲಿ ಸ್ಪಷ್ಟ ಸಂದೇಶ ನೀಡಿದ ಸಿಎಂ, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇವೆರಡಕ್ಕೂ ನೇರಾ ನೇರಾ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಭಿವೃದ್ಧಿ ಕುಂಠಿತವಾದಂತೆ. ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ನೇರ ಹೊಣೆ ಎಂದು ಎಚ್ಚರಿಸಿದರು.
ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ, ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ, ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂದ ಅವರು, ಜಿಲ್ಲಾ ಮಟ್ಟದ ಶಾಂತಿ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರ್ತಾರೆ. ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿಭಂಗ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರಬಾರದು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ನಿಮಗೆ ಎಂದು ಪ್ರಶ್ನಿಸಿದರು.
ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆ ಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್ಪಿಗಳ ಜವಾಬ್ದಾರಿ ತಾನೇ ಎಂದು ಮುಖ್ಯಮಂತ್ರಿಗಳು ಖಾರವಾಗಿಯೇ ಹೇಳಿದ್ದಾರೆ.