ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ಮೇ 31(ನಿನ್ನೆಯ ದಿನ)ರಂದು ನಡೆದ ಒಂದು ಕರುಳು ಹಿಂಡುವ ಘಟನೆಯಲ್ಲಿ ಸುಮಾರು 30 ವರ್ಷ ಅಸುಪಾಸಿನ ಮಾನಸಿಕ ಅಸ್ವಸ್ಥಳಾದ ತುಂಬು ಗರ್ಭಿಣಿ ರೇಣುಕಾ ಎಂಬ ಹೆಸರಿನ ಮಹಿಳೆ ಬೀದಿಯಲ್ಲಿ ಶವವಾಗಿ ಕಂಡು ಬಂದಿದ್ದಾರೆ. ಜಂಗಮಕೋಟೆ ಮೂಲದ ಈ ಮಹಿಳೆ, ದಿಕ್ಕು ದೆಸೆಯಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದವರು. ಅವರನ್ನು ಯಾರೋ ದುಷ್ಕರ್ಮಿಗಳು ದೈಹಿಕವಾಗಿ ದುರ್ಬಳಕೆ ಮಾಡಿ ಗರ್ಭಿಣಿಯನ್ನಾಗಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಮಾನಸಿಕವಾಗಿ ಅಸ್ವಸ್ಥಳಾಗಿದ್ದ ರೇಣುಕಾ, ಶಿಡ್ಲಘಟ್ಟದ ಬೀದಿಗಳಲ್ಲಿ ಅಲೆದಾಡುತ್ತಿದ್ದು, 8 ತಿಂಗಳ ಗರ್ಭಿಣಿಯಾಗಿದ್ದರು, ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದಿಕ್ಕಿಲ್ಲದವರಿಗೆ ಸೂಕ್ತ ರಕ್ಷಣೆಯ ಕೊರತೆಯನ್ನು ಎತ್ತಿ ತೋರಿಸಿದೆ. ರೇಣುಕಾಳ ದಾರುಣ ಅಂತ್ಯವು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿಎಸ್ಐ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ತವ್ಯದ ಜೊತೆಗೆ, ಅವರು ರೇಣುಕಾಳ ಶವವನ್ನು ಸಂಸ್ಕಾರಕ್ಕೆ ಒಯ್ಯಲು ಆರ್ಥಿಕ ಸಹಾಯವನ್ನು ಒದಗಿಸಿ, ಮಾನವೀಯತೆಯ ಮಾದರಿಯಾಗಿ ನಿಂತಿದ್ದಾರೆ. ಈ ಕಾರ್ಯಕ್ಕೆ ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೇಣುಗೋಪಾಲ್ರಿಗೆ ಮೆಚ್ಚುಗೆ ವ್ಯಕ್ತವಾಗಿದೆ.