ಬೆಂಗಳೂರು

ಸಮೀಕ್ಷೆಗೆ ವಿರೋಧ: ಕಾಂತರಾಜು ವರದಿ ಪರ ಬ್ಯಾಟ್ ಬೀಸಿದ ಸಚಿವರಾದ ಹೆಚ್.ಸಿ ಮಹದೇವಪ್ಪ, ಪರಮೇಶ್ವರ್

ಬೆಂಗಳೂರು:- ಸಿಎಂ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಹೈಕಮಾಂಡ್ ಖಡಕ್ ಸೂಚನೆ ನೀಡಿದ್ದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ, ಸಚಿವ ಸಂಪುಟದಲ್ಲಿ ಜಾತಿಗಣತಿ ಮರು ಸರ್ವೆಯನ್ನು ಸಿಎಂ ಪ್ರಸ್ತಾಪ ಮಾಡಿದರು. ಮರು ಸಮೀಕ್ಷೆ ಅಂದರೆ ಸಂಪೂರ್ಣವಾಗಿ ಸಮೀಕ್ಷೆ ಮಾಡಲ್ಲ. ಹಳೆಯ ವರದಿಯನ್ನೇ ಬಳಸಿಕೊಂಡು ಪರಿಷ್ಕರಣೆ ಮಾಡ್ತೀವಿ. ಬಿಟ್ಟು ಹೋದ ಪಂಗಡಗಳನ್ನ ಸೇರ್ಪಡೆ ಮಾಡುತ್ತೇವೆ. ಯಾವ ಸಮುದಾಯಕ್ಕೂ ಅಸಮಾಧಾನ ಆಗಲು ಬಿಡಲ್ಲ ಎಂದು ಸಚಿವರ ಮುಂದೆ ಸಿಎಂ ಪ್ರಸ್ತಾಪಿಸಿದರು.

ಹೆಚ್.ಸಿ ಮಹದೇವಪ್ಪ, ಪರಮೇಶ್ವರ್ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿ, ಕಾಂತರಾಜು ವರದಿ ಪರ ಬ್ಯಾಟ್ ಬೀಸಿದ ಅವರು ಕೆಲ ಲೋಪದೋಷಗಳನ್ನ ಸರಿಪಡಿಸೋಣ, ಸರ್ವೆ ಬೇಡ ಎಂದರು.

ಸಚಿವ ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ದೆಹಲಿಯಲ್ಲಿ ಹೈಕಮಾಂಡ್ ನಾಯಕರು ವರದಿಯ ದತ್ತಾಂಶಕ್ಕೆ ಹತ್ತು ವರ್ಷ ಅವಧಿ ಆಗಿದೆ. 10 ವರ್ಷಗಳ ನಂತರ ಅನೇಕ ಬದಲಾವಣೆ ಆಗಿವೆ ಎಂದು ಸಲಹೆ ಕೊಟ್ಟಿದ್ದರು ಎಂದರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ತಿದ್ದುಪಡಿ ವಿಧೇಯಕದ ಸೆಕ್ಷನ್ 11/1 ಅಡಿಯಲ್ಲಿ ಮತ್ತೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಕಾನೂನು ಮೂಲಕ ಮಾಡಬೇಕಾಗುತ್ತದೆ. ಹಾಗಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಹಿಂದುಳಿದ ಆಯೋಗ ಕೊಟ್ಟಿರುವ ವರದಿ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. ಕೇವಲ ಇದೊಂದೇ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. 54 ಮಾನದಂಡಗಳನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಸಿದ್ದಪಡಿಸಲಾಗಿತ್ತು. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.11 ಕೋಟಿ ಜನಸಂಖ್ಯೆ ಇತ್ತು. 2015ರ ವೇಳೆ 6.35 ಕೋಟಿ ಅಂದಾಜು ಮಾಡಲಾಗಿದೆ ಎಂದಿದ್ದಾರೆ.

ಇದರಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆ ಮಾಡಲಾಗಿದೆ, 1,60,000 ಸಿಬ್ಬಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. 2013ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ವರದಿ ಮತ್ತು ಶಿಫಾರಸು ಅಂತಿಮಗೊಂಡಿರಲಿಲ್ಲ, 2018ರಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಸಮ್ಮಿಶ್ರ ಸರ್ಕಾರ ರಚನೆ ಆದ ಸಂದರ್ಭದಲ್ಲಿ ಎಚ್.ಡಿ ಕುಮಾರಸ್ವಾಮಿ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಗೆ ಕಾಂತರಾಜು ಹಾಗೂ ಸದಸ್ಯರು ವರದಿ ಸ್ವೀಕಾರ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಕುಮಾರಸ್ವಾಮಿ ವಿರೋಧ ಮಾಡಿದ್ದರಿಂದ ವರದಿ ಸ್ವೀಕರಿಸಲಿಲ್ಲ ಎಂದು ಮಾಹಿತಿ ನೀಡಿದರು.

ಕಾಂತರಾಜು ಅವಧಿ ಮುಗಿದ ಬಳಿಕ ಜಯಪ್ರಕಾಶ್ ಹೆಗ್ಡೆಯವರನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿತ್ತು. ಕಾಂತರಾಜು ಆಯೋಗದ ದತ್ತಾಂಶ ಪಡೆದುಕೊಂಡು ಹೆಗ್ಡೆ ಶಿಫಾರಸು ಮಾಡಿದ್ದರು‌, ಸರ್ಕಾರಕ್ಕೆ 29 -2- 2024 ರಂದು ವರದಿ ಸಲ್ಲಿಕೆ ಮಾಡಿದ್ದರು‌. ಲೋಕಸಭಾ ಚುನಾವಣಾ ಕಾರಣಕ್ಕಾಗಿ ವರದಿ ಚರ್ಚೆ ಸಾಧ್ಯ ಆಗಿರಲಿಲ್ಲ. 2025ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದೆವು. ಸಚಿವರು ಸಂಪುಟದಲ್ಲಿ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇಂದಿನ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮವಾಗಿ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಹೇಳಿದರು.