ಬೆಂಗಳೂರು:- ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಎಲ್ಲರಿಗೂ ಬೇಸರ ತರಿಸಿದೆ, ವಿಮಾನ ದುರಂತದಲ್ಲಿ ಸತ್ತವರ ಒಂದೊಂದು ಕಥೆಗಳನ್ನು ಕೇಳುತ್ತಾ ಇದ್ದರೆ ಮನಸ್ಸಿಗೆ ನೋವುಂಟಾಗದೆ ಇರಲಾರದು. ತಂಗಿಗೆ ಲಂಡನ್ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ, ಹೆಂಡತಿ ಚಿತಾ ಭಸ್ಮ ಬಿಟ್ಟು ಬರ್ತಿದ್ದ ಗಂಡ, ಹೆಂಡತಿಯನ್ನ ಕರೆದುಕೊಂಡು ಬರಲು ಹೊರಟಿದ್ದ ಮಾಜಿ ಸಿಎಂ ಹೀಗೆ ಹಲವು ವಿಚಾರಗಳನ್ನು ಕೇಳಿದರೆ ದುಃಖವಾಗದೆ ಇರುತ್ತದೆಯೇ. ಆ ಸಾವುಗಳಿಗೆ ಇಡೀ ದೇಶ ಕಂಬನಿ ಮಿಡಿದಿದೆ ಎಂದು ಮಾಜಿ ಕೇಂದ್ರ ಸಚಿವರಾದ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಮಾನ ಅಪಘಾತದ ಬಳಿಕ ಹಲವರು ಪಿಎಂ ಮೋದಿ ಮೇಲೆ ಗದಾಪ್ರಹಾರ ಮಾಡುತ್ತಾ ಇದ್ದಾರೆ. ನೈತಿಕ ಹೊಣೆಹೊತ್ತು ರಾಜೀನಾಮೆಯನ್ನ ಕೊಡಲೇಬೇಕು ಅಂತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಇಬ್ರಾಹಿಂ ಪಿಎಂ ಪರ ನೇರ ಬ್ಯಾಟಿಂಗ್ ಮಾಡಿ, ಈ ಪ್ರಕರಣಕ್ಕೂ ಮೋದಿಗೂ ಏನ್ರಿ ಸಂಬಂಧ..? ಮೋದಿ ಯಾಕೆ ರಾಜೀನಾಮೆ ಕೊಡಬೇಕು..? ಮೋದಿ ಅವರೇನು ಪೈಲೆಟಾ..? ನಾಗರಿಕ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು. ವಿಮಾನದ ಇಂಜಿನ್ ಫೇಲ್ಯೂರ್ ಅಂದ್ರೆ ಹೇಗೆ..? ಟೇಕಾಫ್ ಆಗೋದಕ್ಕೂ ಮುನ್ನ ಎಲ್ಲಾ ಕ್ಲಿಯರೆನ್ಸ್ ಆಗಿದೆ ಅಂತ ಅಲ್ವಾ..? ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಆದರೂ ಲಂಡನ್ ಗೆ ತೆರಳುತ್ತಿದ್ದ ವಿಮಾನ ಕೇವಲ ಐದೇ ನಿಮಿಷಕ್ಕೆ ಪತನಗೊಂಡಿದೆ.