ದಕ್ಷಿಣ ಕನ್ನಡ

ಇಸ್ರೇಲ್-ಇರಾನ್‌ ವಾರ್: ಕರಾವಳಿಗರ ಕುಟುಂಬ ಆತಂಕ

ಮಂಗಳೂರು:- ಇಸ್ರೇಲ್ ಇರಾನ್‌ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ತಮ್ಮ ನಾಗರಿಕರು ಸುರಕ್ಷಿತವಾಗಿರುವಂತೆ ಅವರ ಮೊಬೈಲ್‌ಗ‌ಳಿಗೆ ಇಸ್ರೇಲ್‌ ಭದ್ರತಾ ಪಡೆಯಿಂದ ಸಂದೇಶ ರವಾನೆಯಾಗಿದೆ. ಕರಾವಳಿ ಮೂಲದ ಸಾವಿರಾರು ಮಂದಿ ಉದ್ಯೋಗದ ನಿಮಿತ್ತ ಇಸ್ರೇಲ್‌ನಲ್ಲಿದ್ದಾರೆ, ಪ್ರಸ್ತುತ ಯಾವುದೇ ಆತಂಕವಿಲ್ಲ ಎಂದು ಇಸ್ರೇಲ್‌ನಲ್ಲಿರುವ ಕರಾವಳಿಗರು ತಿಳಿಸಿದ್ದಾರಾದರೂ ಕುಟಂಬದಲ್ಲಿ ಆತಂಕ ಮನೆ ಮಾಡಿದೆ.

ಜೆರುಸಲೇಂನಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ರಾಜು ಪೂಜಾರಿ ಎಂಬುವರು ಮಾತನಾಡಿ, ಇರಾನ್‌ ಮೇಲಿನ ದಾಳಿಯ ನಂತರ ಸರಕಾರ ಎಚ್ಚರದಿಂದ ಇರುವಂತೆ ಸೂಚಿಸಿದೆ. 30 ನಿಮಿಷ ಮುಂಚಿತವಾಗಿ ಎಚ್ಚರಿಕೆ ನೀಡುತ್ತಾರೆ. ಆ ವೇಳೆ ಬಂಕರ್‌ ಅಥವಾ ಪ್ರತೀ ಮನೆಗಳಲ್ಲಿರುವ ಸುರಕ್ಷಿತ ಕೊಠಡಿಗಳಿಗೆ ತೆರಳಿ ಆಶ್ರಯ ಪಡೆದುಕೊಳ್ಳುತ್ತೇವೆ. ಜೆರುಸಲೆಂ ಸುರಕ್ಷಿತ ಜಾಗವಾಗಿದ್ದು, ಆತಂಕ ಕಡಿಮೆ. 200ಕ್ಕೂ ಅಧಿಕ ಕರಾವಳಿಗರೂ ಸುತ್ತಮುತ್ತ ನೆಲೆಸಿದ್ದೇವೆ ಎಂದು ತಿಳಿಸಿದ್ದಾರೆ.

ಅತ್ಯಧಿಕ ಸಂಖ್ಯೆಯಲ್ಲಿ ಕರಾವಳಿಗರು ನೆಲೆಸಿರುವ ಟೆಲ್‌ ಅವಿವ್‌ನಲ್ಲಿ ಉದ್ಯೋಗದಲ್ಲಿರುವ ಸುನಿತಾ ಕ್ರಾಸ್ತಾ ಮಾತನಾಡಿ, ಗುರುವಾರ ರಾತ್ರಿ ಸೈರನ್‌ ಆಗಿತ್ತು. ಇರಾನ್‌ ಮೇಲೆ ದಾಳಿ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ಪ್ರತಿದಾಳಿ ನಡೆಯಬಹುದು. ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದರು. ಅದರಂತೆ ರಾತ್ರಿ ಪೂರ್ತಿ ಬಂಕರ್‌ಗಳಲ್ಲಿದ್ದೆವು. ಬೆಳಗ್ಗೆ ಇರಾನ್‌ 100 ಡ್ರೋನ್‌ ದಾಳಿ ನಡೆಸಿದೆ ಎಂಬ ಸುದ್ದಿ ಬಂದಿದ್ದು, ಅವುಗಳನ್ನು ಇಸ್ರೇಲ್‌ ಸೇನೆ ಹೊಡೆದಿದೆ ಎಂದು ಹೇಳುತ್ತಾರೆ, ನಾವೆಲ್ಲ ಸುರಕ್ಷಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.