ಹಾವೇರಿ

ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿಗೆ ಗಾಲಿಯ ಶಾಸಕತ್ವ ಸ್ಥಾನ ಸೇಫ್

ಹಾವೇರಿ:- ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲೇ ಜನಾರ್ದನ ರೆಡ್ಡಿಯ ಅನರ್ಹಗೊಂಡ ಶಾಸಕತ್ವ ಸ್ಥಾನ ಸೇಫಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯವು ಕಾರ್ಯಪ್ರವೃತ್ತವಾಗಿದೆ. ತೆಲಂಗಾಣ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಮಾಣ ಪತ್ರದ ಪ್ರತಿಗಾಗಿ ಕಾಯುತ್ತಿದೆ. ಅದು ಕೈ ಸೇರಿದ ಕೂಡಲೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ.

ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯವು ನಿಯಮಬದ್ದವಾಗಿ ಜನಾರ್ದನ ರೆಡ್ಡಿಯ ಶಾಸಕತ್ವ ಸ್ಥಾನವನ್ನು ರದ್ದುಗೊಳಿಸಿತ್ತು. ಅಲ್ಲದೇ ಮುಖ್ಯ ಚುನಾವಣಾಧಿಕಾರಿ ಕಚೇರಿಗೂ ಮಾಹಿತಿ ಒದಗಿಸಿತ್ತು. ಕಾನೂನು ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಶಾಸಕತ್ವ ಸ್ಥಾನ ಖಾಲಿಯಾದ ಆರು ತಿಂಗಳೊಳಗೆ ಉಪಚುನಾವಣೆ ನಡೆಸಬೇಕು. ಹೀಗಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಯು ಸಹ ಜನಾರ್ದನ ರೆಡ್ಡಿ ಪ್ರತಿನಿಧಿಸುತ್ತಿದ್ದ ಗಂಗಾವತಿ ಕ್ಷೇತ್ರದ ಶಾಸಕತ್ವ ಸ್ಥಾನ ಖಾಲಿ ಇರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಅಲ್ಲಿನ ತೀರ್ಪು ನೋಡಿಕೊಂಡು ಮುಂದಿನ ಕಾನೂನು ಪ್ರಕಿಯೆ ಆರಂಭಿಸಲು ಮುಂದಾಗಿತ್ತು. ಅಂತೆಯೇ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ ಕಾರಣ ಇದೀಗ ತನ್ನ ಪ್ರಕ್ರಿಯೆಗಳನ್ನು ನಿಲ್ಲಿಸಿದೆ. ಕರ್ನಾಟಕ ವಿಧಾನಸಭೆ ಸಚಿವಾಲಯವು ಅನಧಿಕೃತವಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಗೆ ನ್ಯಾಯಾಲಯದ ಬೆಳವಣಿಗೆ ಕುರಿತು ಅನಧಿಕೃತವಾಗಿ ವಿಷಯ ತಿಳಿಸಿದೆ. ಜರ್ನಾದನ ರೆಡ್ಡಿ ಅವರಿಂದ ಹೈಕೋರ್ಟ್ ಆದೇಶ ಕುರಿತ ಪ್ರಮಾಣ ಪತ್ರ ಸಲ್ಲಿಕೆಯಾದ ಬಳಿಕ ಅಧಿಕೃತವಾಗಿ ಮಾಹಿತಿ ಒದಗಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಜನಾರ್ದನ ರೆಡ್ಡಿ ಶಾಸಕತ್ವ ರದ್ದುಗೊಂಡ ಬಳಿಕ ಉಪಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೂಡ ಒಂದು ಹೆಜ್ಜೆ ಮುಂದೆ ಸಾಗಿ ಅಭ್ಯರ್ಥಿಗಳ ಆಯ್ಕೆ ಚಟುವಟಿಕೆ ಆರಂಭಿಸಿತ್ತು. ಉಪ ಚುನಾವಣೆಗೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಿದ್ಧತೆಯೂ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಸಭೆಗಳನ್ನು ಸಹ ನಡೆಸಲಾಗುತ್ತಿತ್ತು. ಜನಾರ್ದನ ರೆಡ್ಡಿ ಪಕ್ಷವು ಬಿಜೆಪಿಯಲ್ಲಿ ವಿಲೀನಗೊಂಡ ಕಾರಣ ಪಕ್ಷೇತರವಾಗಿ ಸ್ಪರ್ಧಿಸುವ ಇರಾದೆ ಇತ್ತು. ಆದರೆ, ಹೈಕೋರ್ಟ್ ತೀರ್ಪಿನಿಂದ ಇದೀಗ ಇದೆಲ್ಲದಕ್ಕೂ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ.

ದೇಶದಲ್ಲಿಯೇ ಭಾರೀ ಸಂಚಲನ ಉಂಟು ಮಾಡಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6 ರಂದು ಸಿಬಿಐ ವಿಶೇಷ ನ್ಯಾಯಾಲಯವು ಗಾಲಿ ಜನಾರ್ದನರೆಡ್ಡಿ ಸೇರಿದಂತೆ ನಾಲ್ವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಮತ್ತು ಇತರರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಮನವಿಯನ್ನು ಅಂಗೀಕರಿಸಿರುವ ತೆಲಂಗಾಣ ಹೈಕೋರ್ಟ್, ಸಿಬಿಐ ವಿಶೇಷ ಕೋರ್ಟ್ ನೀಡಿದ ಶಿಕ್ಷೆಯನ್ನು ಅಮಾನ್ಯ ಮಾಡಿತು. ಇದರಿಂದ ಜೈಲು ಪಾಲಾಗಿದ್ದ ರೆಡ್ಡಿ ಸೇರಿದಂತೆ ನಾಲ್ವರು ಬಿಡುಗಡೆ ಭಾಗ್ಯ ಕಂಡಿದ್ದಾರೆ. ಸಿಬಿಐ ಕೋರ್ಟ್ನ ಶಿಕ್ಷೆಯನ್ನು ಮಾತ್ರ ತಡೆ ಹಿಡಿಯಲಾಗಿದ್ದು, ಪ್ರಕರಣವು ಹೈಕೋರ್ಟ್ನಲ್ಲಿ ಮುಂದುವರಿಯಲಿದೆ.

ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿತರಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್ ಮೂರು ಷರತ್ತುಗಳನ್ನು ವಿಧಿಸಿದೆ. 10 ಲಕ್ಷ ರೂಪಾಯಿಗಳ ಎರಡು ಶ್ಯೂರಿಟಿ ಬಾಂಡ್, ವಿದೇಶಕ್ಕೆ ತೆರಳುವಂತಿಲ್ಲ, ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ.