ದೆಹಲಿ:- ಇಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಂಚಿತರಾಗಿರುವ ಸರ್ಫರಾಝ್ ಖಾನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅದು ಕೂಡ ಇಂಗ್ಲೆಂಡ್ ನೆಲದಲ್ಲಿ ಎಂಬುದು ವಿಶೇಷ. ಈ ಹಿಂದೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 92 ರನ್ ಬಾರಿಸಿ ಮಿಂಚಿದ್ದ ಸರ್ಫರಾಝ್ ಇದೀಗ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ.
ಭಾರತ ಮತ್ತು ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದ ಸರ್ಫರಾಝ್ ಕೇವಲ 76 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಸ್ಪೋಟಕ ಇನಿಂಗ್ಸ್ನಲ್ಲಿ ಸರ್ಫರಾಝ್ ಬ್ಯಾಟ್ನಿಂದ ಮೂಡಿಬಂದ ಫೋರ್ಗಳ ಸಂಖ್ಯೆ 15, ಹಾಗೆಯೇ 2 ಸಿಕ್ಸರ್ಗಳನ್ನು ಸಹ ಬಾರಿಸಿದ್ದಾರೆ.
ಸರ್ಫರಾಝ್ ಖಾನ್ ಹೀಗೆ ಅಬ್ಬರಿಸಿರುವುದು ಟೀಮ್ ಇಂಡಿಯಾದ ಅನುಭವಿ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರ ಮುಂದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದಾಗ್ಯೂ ಭಾರತ ಟೆಸ್ಟ್ ತಂಡದ ಬೌಲರ್ಗಳಿಗೆ ಸರ್ಫರಾಝ್ ಖಾನ್ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಂದರೆ 101 ರನ್ಗಳೊಂದಿಗೆ ಅಜೇಯರಾಗಿ ಮರಳಿದ್ದರು.
ಕಳೆದ ವರ್ಷ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಸರ್ಫರಾಝ್ ಖಾನ್ ನ್ಯೂಝಿಲೆಂಡ್ ವಿರುದ್ಧ 150 ರನ್ ಬಾರಿಸಿ ಮಿಂಚಿದ್ದರು. ಆದರೆ, ಈ ಭರ್ಜರಿ ಸೆಂಚುರಿ ಬಳಿಕ ಯುವ ದಾಂಡಿಗನಿಗೆ ಕಣಕ್ಕಿಳಿದದ್ದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸರ್ಫರಾಝ್ ಇಡೀ ಸರಣಿಯಲ್ಲಿ ಬೆಂಚ್ ಕಾದಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಚಾನ್ಸ್ ನೀಡಲಾಗಿಲ್ಲ, ಇತ್ತ ಭಾರತ ಎ ತಂಡದ ಪರ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಸರ್ಫರಾಝ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 92 ರನ್ ಬಾರಿಸಿ ಮಿಂಚಿದ್ದಾರೆ. ಇದೀಗ ಟೀಮ್ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇವಲ 76 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸಿ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.