ದಕ್ಷಿಣ ಕನ್ನಡ

ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರಿಗೆ

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತರ ಮನೆಗಳಿಗೆ ಇತ್ತೀಚೆಗೆ ಪೊಲೀಸರು ರಾತ್ರಿ ಭೇಟಿ ನೀಡುತ್ತಿದ್ದಾರೆ, ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇದೇ ರೀತಿ ಆರೋಪಿಸಿ, ಈ ಬಗ್ಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಇತ್ತೀಚೆಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆ ಬಳಿಕ ಸಮಗ್ರ ತನಿಖೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ಮಾಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್‌ ಶೆಟ್ಟಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಿದ್ದರು. ದೂರು ದಾಖಲಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗ ರಾಜ್ಯ ಡಿಜಿ&ಐಜಿಪಿಗೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಯಾವುದೇ ಅಪರಾಧದ ಹಿನ್ನೆಲೆ, ಎಫ್​ಐಆರ್, ವಾರೆಂಟ್ ನೀಡದೆ ಕಾನೂನು ಬಾಹಿರವಾಗಿ ರಾತ್ರಿ 11 ಗಂಟೆ ನಂತರ ಭೇಟಿ ನೀಡುತ್ತಿದ್ದಾರೆ. ಇದರಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದೆ. ಪೊಲೀಸರು ಮನೆಗಳಿಗೆ ಹೋಗಿ ಛಾಯಾಚಿತ್ರ ತೆಗೆದು, GPS ಸ್ಥಳ ಮಾಹಿತಿ ಸಂಗ್ರಹಿಸಿ, ಪ್ರಶ್ನೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ ವಿರುದ್ಧ ಶಾಸಕ ಭರತ್ ಶೆಟ್ಟಿ ದೂರು‌ ನೀಡಿದ್ದರು.

ಭರತ್ ಶೆಟ್ಟಿ ಮನೆಗೆ ಅಧಿಕಾರಿಗಳು ಭೇಟಿ:
ಆದೇಶದ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತನಿಖಾ ವಿಭಾಗದ ಅಧಿಕಾರಿಗಳು ಶಾಸಕ, ದೂರುದಾರ ಡಾ.ವೈಭರತ್ ಶೆಟ್ಟಿ ಮನೆಗೆ ಭೇಟಿ ನೀಡಿ ಏನೇನೆಲ್ಲಾ ಸಮಸ್ಯೆ ಆಗಿದೆ ಎಂದು ಮಾಹಿತಿ ಪಡೆದರು. ದಕ್ಷಿಣ ಕನ್ನಡದಲ್ಲಿ ಸರಣಿ ಹತ್ಯೆಗಳು ನಡೆದವು. ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಪೊಲೀಸರು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಮುಖಂಡರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದಾರೆ. ಇದು ಸರಿ ಅಲ್ಲ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.