ಟೆರ್ರಾನ್:- ಇಸ್ರೇಲ್ ಜೊತೆ ಇರಾನ್ ಕದನ ವಿರಾಮ ಮಾಡಿಕೊಳ್ಳಬೇಕೆಂದು ಅಮೆರಿಕ ಈ ಹಿಂದೆ ನೀಡಿದ್ದ ಸಲಹೆಯನ್ನು ಇರಾನ್ ತಳ್ಳಿಹಾಕಿತ್ತು. ಇದಾದ ನಂತರ ಅಮೆರಿಕ ಇರಾನ್ ವಿರುದ್ಧ ಇಸ್ರೇಲ್ ಜೊತೆ ಕೈಜೋಡಿಸಲಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು.
ಅದಕ್ಕೆ ಸರಿಯಾಗಿ ನಿನ್ನೆ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯನ್ನು ಅರ್ಧಕ್ಕೇ ಬಿಟ್ಟು ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕದನವಿರಾಮದ ಮಾತೇ ಇಲ್ಲ. ದೊಡ್ಡ ಅಂತ್ಯವೇ ಸಿಗಲಿದೆ ಎಂದು ಸುಳಿವು ನೀಡಿದ್ದರು. ಇಂದು ಇರಾನ್‌ನ ಸುಪ್ರೀಂ ನಾಯಕ ಖಮೇನಿ ಎಲ್ಲಿ ಅಡಗಿದ್ದಾರೆಂದು ಅಮೆರಿಕಕ್ಕೆ ತಿಳಿದಿದೆ. ಆದರೆ, ನಾವು ಅವರನ್ನು ಕೊಲ್ಲುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಇದೆಲ್ಲದರ ಬಳಿಕ ಇದೀಗ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಟಿವಿಯಲ್ಲಿನ ಸಂದೇಶದಲ್ಲಿ, ಇರಾನ್ ಇದೀಗ ನಡೆಯುತ್ತಿರುವ ಯುದ್ಧದ ವಿರುದ್ಧ ದೃಢವಾಗಿ ನಿಲ್ಲುತ್ತದೆ. ನಾವು ಶರಣಾಗುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಬೇಷರತ್ತಾದ ಶರಣಾಗತಿಗಾಗಿ ಟ್ರಂಪ್ ಅವರ ಕರೆಯನ್ನು ತಿರಸ್ಕರಿಸಿದ್ದಾರೆ.
ಇರಾನ್ ಜನರನ್ನು ಉದ್ದೇಶಿಸಿ ತನ್ನ ರಹಸ್ಯ ಅಡಗುತಾಣದಿಂದ ಶತ್ರುಗಳಿಗೆ ಸಂದೇಶವನ್ನು ಕಳುಹಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಟೆಹ್ರಾನ್ “ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ ಸ್ಪಷ್ಟ ಸಂದೇಶದಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಶರಣಾಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಯಾವುದೇ ಅಮೇರಿಕನ್ ಮಿಲಿಟರಿ ಹಸ್ತಕ್ಷೇಪವು ಸರಿಪಡಿಸಲಾಗದ ಹಾನಿಯನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
“ಇರಾನ್ ನಮ್ಮ ರಾಷ್ಟ್ರ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ಧಿವಂತ ಜನರು ಈ ರಾಷ್ಟ್ರದೊಂದಿಗೆ ಎಂದಿಗೂ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದಿಲ್ಲ. ಏಕೆಂದರೆ ಇರಾನ್ ರಾಷ್ಟ್ರವು ಶರಣಾಗುವುದಿಲ್ಲ. ಯಾವುದೇ ಯುಎಸ್ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತದೆ ಎಂದು ಅಮೆರಿಕನ್ನರು ತಿಳಿದಿರಬೇಕು” ಎಂದು ಸುಪ್ರೀಂ ಲೀಡರ್ ಖಮೇನಿ ಹೇಳಿದ್ದಾರೆ.