ಬೆಂಗಳೂರು:- ಕಾಂಗ್ರೆಸ್ನಲ್ಲಿ ದಿನಬೆಳಗಾದರೆ ಒಂದಲ್ಲೊಂದು ತಿಕ್ಕಾಟ ನಡೆಯುತ್ತಲೇ ಇರುತ್ತವೆ, ಇದೀಗ ಹೊಸ ಜಗಳ ಶುರುವಾದಂತೆ ಕಾಣುತ್ತಿದೆ. ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿ ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಕೆ.ಎನ್ ರಾಜಣ್ಣ ವಿರುದ್ಧ ಭೀಮಾ ನಾಯ್ಕ್ ಕಿಡಿ:
ಬಳ್ಳಾರಿ ಹಾಲು ಒಕ್ಕೂಟದ ಚುನಾವಣೆಯೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಚುನಾವಣೆ ತಡವಾಗುತ್ತಿರುವುದಕ್ಕೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ದ ಕಾಂಗ್ರೆಸ್ ನಾಯಕರೇ ಗರಂ ಆಗಿದ್ದಾರೆ. ರಾಜಣ್ಣ ವಿರುದ್ಧ ಬೇಸರಗೊಂಡಿರುವ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆಂದು ತಿಳಿದಿದೆ.
ಬಳ್ಳಾರಿ ಹಾಲು ಒಕ್ಕೂಟದ ಚುನಾವಣೆ ತಡವಾಗಲು ರಾಜಣ್ಣ ಕಾರಣ ಅಂತ ಆರೋಪಿಸಿರುವ ಭೀಮಾ ನಾಯ್ಕ್, ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ದಾಖಲೆ ಸಮೇತ ರಾಜಣ್ಣ ವಿರುದ್ದ ಸಿಎಂಗೆ ದೂರು ನೀಡಿದ್ದಾರಂತೆ.
ತುರ್ತು ಚುನಾವಣೆ ನಡೆಸಲು ಧಾರವಾಡದ ಹೈಕೋರ್ಟ್ ಪೀಠ ಸೂಚಿಸಿದ್ದರೂ ಅಧಿಕಾರಿಗಳನ್ನು ಬಳಸಿಕೊಂಡು ರಾಜಣ್ಣ ಚುನಾವಣೆ ವಿಳಂಬ ಮಾಡುತ್ತಿದ್ದಾರೆ ಎಂದು ಭೀಮಾನಾಯ್ಕ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಒಕ್ಕೂಟದ ಹಾಲಿ ನಿರ್ದೇಶಕರನ್ನು ಸಂಪರ್ಕಿಸಿದರೂ ಸ್ಪಂದನೆ ಇಲ್ಲವೆಂದು ಭೀಮಾ ನಾಯ್ಕ್ ಕಿಡಿಕಾರಿದ್ದಾರೆ.
ರಾಜಣ್ಣಗೆ ಬರಲು ಹೇಳಿದ ಸಿಎಂ ಸಿದ್ದರಾಮಯ್ಯ:
ಬಳ್ಳಾರಿ ಹಾಲು ಒಕ್ಕೂಟದ ಚುನಾವಣೆ ಬಗ್ಗೆ ರಾಜಣ್ಣರನ್ನು ಕರೆದು ಮಾತನಾಡ್ತೀನಿ ಅಂತ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿ, ನಾನು ರಾಜಣ್ಣ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸ್ತೀನಿ ಎಂದು ಭರವಸೆ ನೀಡಿದ್ದಾರಂತೆ.