ಶಿವಮೊಗ್ಗ

ಸಿಗಂದೂರು: ಸೇತುವೆ ಉದ್ಘಾಟನೆಗೂ ಮುನ್ನ ನಾಮಕರಣಕ್ಕಾಗಿ ಚರ್ಚೆ

ಶಿವಮೊಗ್ಗ:- ರಾಜ್ಯದ ಅತೀ ಉದ್ದದ ತೂಗು ಸೇತುವೆ ಎಂದೇ ಖ್ಯಾತಿ ಪಡೆದಿರುವ ಸಿಗಂದೂರು ಸೇತುವೆಯ ಕಾರ್ಯ ಬಹುತೇಕ ಅಂತ್ಯಗೊಂಡಿದ್ದು, ಜುಲೈ 14 ರಂದು ಉದ್ಘಾಟನೆಗೆ ದಿನಾಂಕ ನಿಗಧಿಯಾಗಿದೆ. ಕೇಂದ್ರ ಸಾರಿಗೆ ಸಚಿವ ನಿತನ್ ಗಡ್ಕರಿ ಅವರು ಈ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.

ಇದರಿಂದ ಬಹು ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಸೇತುವೆ ಇದೀಗ ನನಸಾಗುತ್ತಿದ್ದು, ದ್ವೀಪದ ಜನರ ಸಂಕಷ್ಟದ ದಿನಗಳು ದೂರವಾಗಲಿದೆ. ಇದರಿಂದ ಹೊಸ ಶಕೆ ಆರಂಭವಾಗುವ ಭರವಸೆ ಜನಸಾಮಾನ್ಯರಿಗೆ ಲಭಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೇತುವೆ ಜುಲೈ 14 ರಿಂದ ಲೋಕಾರ್ಪಣೆಯಾಗಲಿದೆ. ಆದರೆ, ಇದಕ್ಕೆ ಸುರಿಯುತ್ತಿರುವ ಧಾರಕಾರ ಮಳೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ವೇಳೆ ಮಳೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ, ಕಾರ್ಯಕ್ರಮ ಮುಂದಕ್ಕೆ ಹೋಗುವ ಸಾಧ್ಯತೆಗಳೂ ಇವೆ. ಆದರೆ, ಸೇತುವೆ ಉದ್ಘಾಟನೆಯಾಗಿ ವಾಹನ ಸಂಚಾರ ಪ್ರಾರಂಭವಾಗುವ ಮುನ್ನೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಸೇತುವೆಗೆ ನಾಮಕರಣ ಮಾಡುವ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹತ್ತು ಹಲವು ಹೆಸರುಗಳು ಪ್ರಸ್ತಾಪಗೊಂಡಿವೆ.

ಅನೇಕರು ಸಿಗಂದೂರು ಶ್ರೀ ಚೌಡೇಶ್ವರಿ ಹೆಸರು ಇಡಬೇಕು ಎಂದು ಮನವಿ ಮಾಡಿದ್ದಾರೆ. ಏಕೆಂದರೆ ಇದು ಸಿಂಗದೂರು ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡುವ ಸೇತುವೆಯಾಗಿರುವ ಹಿನ್ನೆಲೆ ಇದೇ ಸೂಕ್ತ ಎನ್ನುತ್ತಿದ್ದಾರೆ. ಆದರೆ, ಇದರ ಜೊತೆಯಲ್ಲಿಯೇ ಸಿಗಂದೂರು, ರಾಣಿ ಚನ್ನಭೈರಾದೇವಿ, ಸಿಗಂದೂರು ಶ್ರೀಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮುಂತಾದ ಹೆಸರುಗಳು ಮಂಚೂಣಿಯಲ್ಲಿ ಕೇಳಿ ಬರುತ್ತಿವೆ.

ಈ ಸೇತುವೆ ಈ ಹಿಂದಿನಿಂದಲೂ ಸಿಗಂದೂರು ಸೇತುವೆ ಎಂದು ಖ್ಯಾತಿ ಪಡೆದಿದೆ. ನೂತನವಾಗಿ ನಿರ್ಮಿಸಿರುವ ಈ ಸೇತುವೆಗೆ ಇದೇ ಹೆಸರನ್ನು ಇಡಬೇಕು ಎನ್ನ್ನುವುದು ಅನೇಕರ ವಾದವಾಗಿದೆ. ಚಾಲ್ತಿಯಲ್ಲಿರುವ ಹೆಸರೇ ಸೂಕ್ತ ಎಂದಿದ್ದಾರೆ. ವ್ಯಕ್ತಿಗಳ ಹೆಸರಿಟ್ಟರೂ ಈ ಹಿಂದಿನಿಂದಲೂ ಚಾಲ್ತಿಯಲ್ಲಿರುವ ಹೆಸರನ್ನೇ ಜನಸಾಮಾನ್ಯರು ಕರೆಯಲಿದ್ದಾರೆ. ಆದ್ದರಿಂದ ಸಿಗಂದೂರು ಹೆಸರೇ ಸೂಕ್ತ ಎಂದಿದ್ದಾರೆ. ಇದನ್ನು ಅಧಿಕೃತಗೊಳಿಸಬೇಕು ಎನ್ನುವುದು ಅನೇಕರ ವಾದವಾಗಿದೆ.

ಇನ್ನು ಕೆಲವರು ಇದಕ್ಕೆ ಸಾಕಷ್ಟು ಮುತುರ್ಜಿ, ಕಾಳಜಿವಹಿಸಿ ಬಿ.ಎಸ್ ಯಡಿಯೂರಪ್ಪ, ಮತ್ತು ಅವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ಸಾಕಷ್ಟು ಕೆಲಸ ಮಾಡಿದರ ಫಲವಾಗಿ ಕೇಂದ್ರದ ಅನುದಾನದೊಂದಿಗೆ ನಿರ್ಮಾಣವಾಗಿದೆ. ಆದ್ದರಿಂದ ಯಡಿಯೂರಪ್ಪ ಅವರ ಹೆಸರು ಇಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಸಣ್ಣ ಗುಡಿಯಾಗಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಅಭಿವೃದ್ದಿ ಪಡಿಸಿ ಸಿಗಂದೂರು ದೇಗುಲವನ್ನು ರಾಜ್ಯದ ಪ್ರಸಿದ್ದ ಧಾರ್ಮಿಕ ಕ್ಷೇತ್ರವನ್ನಾಗಿಸಿದ ಕೀರ್ತಿ ಧರ್ಮಾಧಿಕಾರಿ ರಾಮಪ್ಪ ಅವರದ್ದು, ಈ ರೀತಿಯಲ್ಲಿ ಅಭಿವೃದ್ದಿಪಡಿಸಿದ ಫಲವಾಗಿ ಇಂದು ಸೇತುವೆನೂ ನಿರ್ಮಾಣವಾಗಿದೆ. ಭಕ್ತಾಧಿಗಳ ಪ್ರತಿನಿತ್ಯ ಆಗ್ರಹ ಪಡಿಸಿದ್ದ ಹಿನ್ನೆಲೆಯಲ್ಲಿ ಇದು ನಿರ್ಮಾಣವಾಗಿದೆ ಆದ್ದರಿಂದ ಅವರ ಹೆಸರನ್ನು ಇಡುವುದು ಸೂಕ್ತ ಎಂದು ಇನ್ನು ಅನೇಕರು ಚರ್ಚೆಯಲ್ಲಿ ಪಾಲ್ಗೊಂಡು ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಸೇತುವೆ ಉದ್ಘಾಟನೆಗೂ ಮುನ್ನ ಅದರ ನಾಮಕರಣಕ್ಕಾಗಿ ಚರ್ಚೆ ಜೋರಾಗಿಯೇ ನಡೆಯುತ್ತದೆ. ಅಂತಿಮವಾಗಿ ರಾಜ್ಯ ಸರ್ಕಾರ ಯಾವ ಹೆಸರನ್ನು ಸೂಚಿಸುತ್ತದೆ, ಕೇಂದ್ರ ಯಾವ ಹೆಸರನ್ನು ಇಡಲಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.