ಮಂಗಳೂರು:- ದಲಿತ ವ್ಯಕ್ತಿಯೊಬ್ಬ ಪಾಪಪ್ರಜ್ಞಾ ಹಾಗೂ ಪಶ್ಚಾತ್ತಾಪದಿಂದ ಆಘಾತಕಾರಿ ಘಟನೆಗಳನ್ನ ಬಹಿರಂಗಪಡಿಸಿದ್ದಾರೆ. 1998 ರಿಂದ 2014ರ ನಡುವೆ ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯಾದ ಶಾಲಾ ಬಾಲಕಿಯರು, ಯುವತಿಯರು ಸೇರಿದಂತೆ ಹಲವು ಮಹಿಳೆಯರ ಶವಗಳನ್ನು ಬಲವಂತಕ್ಕೆ ಮಣಿದು ಸುಟ್ಟು ಮತ್ತು ಹೂತು ಹಾಕಿದ್ದೇನೆ ಎಂದು ದಕ್ಷಿಣ ಕನ್ನಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ನೈರ್ಮಲ್ಯ ಉದ್ಯೋಗಿಯ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು ಒಂದು ದಶಕದ ನಂತರ ಪಶ್ಚಾತ್ತಾಪದಿಂದ ಮತ್ತು ಅತ್ಯಾಚಾರ ಹಾಗೂ ಕೊಲೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಾನು ಮುಂದೆ ಬಂದಿದ್ದೇನೆ ಎಂದು ಮಾಜಿ ನೈರ್ಮಲ್ಯ ಉದ್ಯೋಗಿ ಹೇಳಿಕೊಂಡಿದ್ದಾನೆ.
ಧರ್ಮಸ್ಥಳದ ಸುತ್ತ ಮುತ್ತ ಹಲವು ಹೆಣಗಳ ಅಸ್ತಿ ಪಂಜರ ಸಿಗುತ್ತಿವೆ ಎಂಬ ಮಾತು ಬಹುದಿನಗಳಿಂದ ಕೇಳಿ ಬರುತ್ತಿತ್ತು.ಇದೀಗ ಮಾಜಿ ನೈರ್ಮಲ್ಯ ಉದ್ಯೋಗಿ ಕೊಟ್ಟ ದೂರನ್ನ ಗಮನಿಸಿದ್ರೆ ಅದೆಷ್ಟು ಹೂತಿದ್ದ ಹೆಣಗಳು ಹೊರಬರುತ್ತಾ ಕಾದುನೋಡ್ಬೇಕಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಅರುಣ್ ಕೆ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ.
ಇನ್ನೂ ದೂರು ಕೊಟ್ಟ ವ್ಯಕ್ತಿಯೂ ತನ್ನ ಗುರುತನ್ನು ಬಹಿರಂಗಪಡಿಸದಂತೆ ವಿನಂತಿಸಿದ್ದಾನೆ ಮತ್ತು ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದ ನಂತರ, ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ. ಇತ್ತ ಭಯಾನಕ ಸತ್ಯದ ಬಗ್ಗೆ ಮಾಹಿತಿ ನೀಡುವವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿದ್ದಾರೆ. ಮಾಹಿತಿ ನೀಡುವವರನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ದೂರಿನ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ತನ್ನ ದೂರಿನ ಜೊತೆಗೆ, ತಾನು ಹೂತುಹಾಕಿದ ಶವಗಳ ಅವಶೇಷಗಳ ಛಾಯಾಚಿತ್ರಗಳನ್ನು ಮತ್ತು ಇತ್ತೀಚೆಗೆ ಹೊರತೆಗೆದ ಶವಗಳ ಛಾಯಾಚಿತ್ರಗಳನ್ನು ಪೊಲೀಸರಿಗೆ ಸಲ್ಲಿಸಿರುವುದಾಗಿ ಎಂದು ಮಾಜಿ ನೈರ್ಮಲ್ಯ ಉದ್ಯೋಗಿ ಹೇಳಿಕೊಂಡಿದ್ದಾರೆ.