ಮೈಸೂರು:- ಐದು ವರ್ಷ ನಾನೇ ಸಿಎಂ ಎಂದು ದೆಹಲಿಯಲ್ಲಿ ನಿಂತು ಕಹಳೆ ಊದಿದ್ದ ಸಿಎಂ ಸಿದ್ದರಾಮಯ್ಯನವರು ಇದೀಗ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದು ಕೂಡ ಅವರ ತವರು ಜಿಲ್ಲೆಯಲ್ಲಿ. ಜುಲಾಯಿ 19ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿ ಕ್ಷೇತ್ರದಿಂದ 6ರಿಂದ 8 ಸಾವಿರ ಕಾಂಗ್ರೆಸ್ ಕಟ್ಟಾಳನ್ನು ಕರೆತರುವಂತೆ ಶಾಸಕರಿಗೆ ಸಿದ್ದರಾಮಯ್ಯ ಕಟ್ಟಪ್ಪಣೆ ನೀಡಿದ್ದಾರೆ.
ಮೈಸೂರಿನ ಸಾಧನಾ ಸಮಾವೇಶದಲ್ಲಿ 2,600 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶದ ಜವಾಬ್ದಾರಿಯನ್ನ ಸಿಎಂ ಸಿದ್ದರಾಮಯ್ಯ ಆಪ್ತರೂ ಆಗಿರುವ ಸಚಿವ ಡಾ.ಮಹದೇವಪ್ಪ ಹೆಗಲಿಗೆ ವಹಿಸಲಾಗಿದೆ.
ಈಗಾಗಲೇ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದ್ದು, ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲ್ಯಾನ್ ರೂಪಿಸಲಾಗಿದೆ. ಅಲ್ಲದೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತ್ತ ಸಿಎಂ ಕಟ್ಟಪ್ಪಣೆಯ ಹಿನ್ನೆಲೆ ಕೈ ಶಾಸಕರು ಪೂರ್ವ ಭಾವಿ ಸಭೆ ಮಾಡಿದ್ದಾರೆ. ಜನರನ್ನು ಕರೆತರಲು ಪ್ರತಿ ಕ್ಷೇತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಬಸ್ ಪೂರೈಕೆ, ನಗರ ಕ್ಷೇತ್ರಗಳಿಗೆ ಬಸ್ ಬದಲು ಮಿನಿ ಬಸ್, ಕ್ಯಾಂಟರ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಖಂಡರಿಗೆ ಸೂಚನೆ ನೀಡಲಾಗಿದೆ.
ಸಿದ್ದರಾಮಯ್ಯಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡಲು ತಯಾರಿ: ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡಲು ತಯಾರಿ ನಡೆಸಲಾಗುತ್ತಿದ್ದು, ಈ ಬಗ್ಗೆ ನಿನ್ನೆಯ ದಿನ ನಡೆದ ಚಾಮರಾಜ ಕ್ಷೇತ್ರದ ಕೈ ಮುಖಂಡರ ಸಭೆಯಲ್ಲಿ ಪ್ರಶಸ್ತಿ ನೀಡುವ ಕುರಿತಾಗಿ ಸಂವಿಧಾನ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ಅಂಬೇಡ್ಕರ್ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಹೀಗಾಗಿ ಮೈಸೂರು ಸಾಧನ ಸಮಾವೇಶದಲ್ಲಿ ಅವರಿಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡೋಣ ಎಂದು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೂರು ದಿನ ಮೊದಲೇ ಮೈಸೂರಿಗೆ ಸಿಎಂ: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸಮಾವೇಶ ಇರುವುದು ಜುಲೈ 19ರಂದು. ಆದರೆ, ಮೂರು ದಿನ ಮೊದಲೇ ಅಂದರೆ ಜುಲೈ 17ರಂದೇ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಅಲ್ಲೇ ಠಿಕಾಣಿ ಹೂಡಲಿದ್ದಾರೆ. ಸಾಧನ ಸಮಾವೇಶದ ನೆಪದಲ್ಲಿ ತಮ್ಮ ಪರ ಇರುವ ಬೆಂಬಲವನ್ನು ಹೈಕಮಾಂಡ್ ಹಾಗೂ ವಿರೋಧಿ ಪಾಳಯದವರಿಗೆ ತಲುಪಿಸುವುದು ಸಿದ್ದರಾಮಯ್ಯ ಉದ್ದೇಶ ಇರಬಹುದು ಎಂದು ಈಗಾಗಲೇ ಬಿಸಿ ಗಾಳಿ ಆರಂಭವಾಗಿದೆ.