ಚಿಕ್ಕಮಗಳೂರು

8ನೇ ತರಗತಿಯ ಸಿಂಧೂರಳ ಪತ್ರ ದೇಶದ ಪ್ರಧಾನಿಗೆ.!

ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ತಾಲೂಕಿನ ಮಲಗಾರು ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೇಶದ ಗಮನ ಸೆಳೆದಿದ್ದಾಳೆ.

ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದು ಗುರಿ ಸಾಧನೆಯಂತೆ ಆಗುತ್ತಿದೆ, ಮನೆಯಿಂದ ಶಾಲೆಗೆ ದಿನವೂ 3-4 ಕಿ.ಮೀ. ನಡೆದು ಸಾಗಬೇಕಿದ್ದು, ಗ್ರಾಮೀಣ ರಸ್ತೆಯ ದುಸ್ಥಿತಿಯಿಂದ ಬೇಸತ್ತು ಪ್ರಧಾನಿಗೆ ಪತ್ರ ಬರೆದಿದ್ದಾಳೆ.

ಊರಿನ ಮುಖ್ಯ ರಸ್ತೆಯು ತುಂಬಾ ಹಾಳಾಗಿದ್ದು, ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಆರೋಪಿಸಿರುವ ಸಿಂಧೂರ, ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ, ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ವಾರದಲ್ಲಿ 3-4 ದಿನ ಶಾಲೆಗೆ ಹೋಗಲು ಸಾಧ್ಯವಿಲ್ಲ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

ಶೃಂಗೇರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಪ್ಪ ತಾಲ್ಲೂಕು ಹಾಲಿ ಕಾಂಗ್ರೆಸ್ ಶಾಸಕ ರಾಜೇಗೌಡ, ಸಂಸದರಾಗಿ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯರುಗಳಾಗಿ ಪ್ರಾಣೇಶ್, ಬೋಜೇಗೌಡ, ಮಾಜಿ ಸಚಿವ ಜೀವರಾಜ್ ಸೇರಿದಂತೆ ಘಟಾನುಘಟಿ ನಾಯಕರಿದ್ದು ಒಂದು ಗ್ರಾಮದ ರಸ್ತೆ ಸರಿಪಡಿಸಲು ಸರ್ಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿನಿಯೊಬ್ಬಳು ದೇಶದ ಪ್ರಧಾನಿಗೆ ಪತ್ರ ಬರೆದಿದ್ದಾಳೆ ಎಂದರೆ ಎತ್ತ ಸಾಗುತ್ತಿದೆ ನಮ್ಮ ಕ್ಷೇತ್ರದ ಅಭಿವೃದ್ಧಿ ಎಂದು ಚಿಂತಿಸಬೇಕಾಗುತ್ತದೆ.