ಚಿಕ್ಕಮಗಳೂರು

ಬೀರೂರು ಪುರಸಭೆ: ಭಾಗ್ಯಲಕ್ಷ್ಮೀ ಮೋಹನ್ ಅಧ್ಯಕ್ಷರಾಗಿ ಆಯ್ಕೆ

ಚಿಕ್ಕಮಗಳೂರು:- ಜಿಲ್ಲೆಯ ಬೀರೂರು ಪುರಸಭೆಯಲ್ಲಿ ಕಮಲ ಅರಳಲು ಕಾಂಗ್ರೆಸ್ ಪರೋಕ್ಷವಾಗಿ ಸಹಕಾರ ನೀಡಿದಂತಾಗಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಬೀರೂರು ಪುರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ, ವಿಪ್ ನಡುವೆಯೂ ಕಾಂಗ್ರೆಸ್ಸಿನ ಮೂವರು ಸದಸ್ಯರು ಗೈರಾಗಿ ಶಾಸಕ ಮತ್ತು ಸಂಸದರ ಮತದಾನ ಮಾಡಿಯೂ ರೋಚಕ ಹಣಾಹಣಿ ನಡುವೆ ಪುರಸಭೆ ಅಧ್ಯಕ್ಷರಾಗಿ ಬಿಜೆಪಿಯ ಭಾಗ್ಯಲಕ್ಷ್ಮೀ ಮೋಹನ್ ಆಯ್ಕೆಯಾಗಿದ್ದಾರೆ.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡ್ ಸದಸ್ಯೆ ಭಾಗ್ಯಲಕ್ಷ್ಮೀ ಹಾಗೂ 23ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಜ್ಯೋತಿ ಸಂತೋಷ್ ನಾಮಪತ್ರ ಸಲ್ಲಿಸಿದ್ದರು, 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿಯ 11, ಕಾಂಗ್ರೆಸ್ 9, ಜೆಡಿಎಸ್ ಇಬ್ಬರು, ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಬಳಿಕ ಬಿಜೆಪಿ ಸದಸ್ಯರು ಸಭೆಗೆ ಆಗಮಿಸಿದರು. ಇವರೊಂದಿಗೆ 9ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ನಂದಿನಿ ರುದ್ರೇಶ್ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿ ಹುಬ್ಬೇರುವಂತೆ ಮಾಡಿತ್ತು.

ಬಳಿಕ ಕಾಂಗ್ರೆಸ್ ಸದಸ್ಯರು ಬಂದಾಗ, ಬಿಜೆಪಿಯ ಮಾಣಿಕ್ ಬಾಷಾ, ಈ ಹಿಂದೆ ಬಿಜೆಪಿ ನೆರವಿನಿಂದ ಅಧ್ಯಕ್ಷರಾಗಿದ್ದ ವನಿತಾ ಮಧು, ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯ ಎಸ್.ಎನ್.ರಾಜು ಅವರನ್ನೂ ಕರೆದುಕೊಂಡು ಬಂದಿದ್ದೂ ಕೂಡ ಅಚ್ಚರಿ ಬೆಳವಣಿಗೆಗೆ ಸಾಕ್ಷಿಯಾಗಿತ್ತು.

ಕಡೂರು ಶಾಸಕ ಕೆ.ಎಸ್.ಆನಂದ್, ಹಾಸನ ಸಂಸದ ಶ್ರೇಯಸ್ ಪಟೇಲ್ ಕೂಡ ಮತಚಲಾಯಿಸಿದ್ದು ವಿಶೇಷ. ಲೋಕಸಭಾ ಸದಸ್ಯರೊಬ್ಬರು ಪುರಸಭೆ ಅಥವಾ ನಗರಸಭೆಗೆ ಮತ ಚಲಾಯಿಸಿದ 2ನೇ ಪ್ರಕರಣ ಇದಾಗಿದೆ. ಈ ಮೊದಲು ಡಿ.ಸಿ. ಶ್ರೀಕಂಠಪ್ಪ ಮತ ಚಲಾಯಿಸಿದ್ದರು.

ವಿಪ್ ಜಾರಿಯಾದ್ರೂ 2ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಸಮೀವುಲ್ಲಾ, 10ನೇ ವಾರ್ಡ್ ಸದಸ್ಯೆ ರೋಹಿಣಿ ವಿನಾಯಕ್, 19ನೇ ವಾರ್ಡ್ ಸದಸ್ಯೆ ಜ್ಯೋತಿ ವೆಂಕಟೇಶ್ ಸಭೆಗೆ ಗೈರಾಗಿದ್ದರು.

ಮತದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನ ಸಭೆಯಲ್ಲಿ ಹೈಡ್ರಾಮಾವೇ ನಡೆದಿತ್ತು. ಎಲ್ಲಾ ಸದಸ್ಯರು ಬರುವ ತನಕ ವೋಟಿಂಗ್ ಆರಂಭಿಸದಂತೆ, ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದರು. ಕೆಲ ಹೊತ್ತಿನ ಬಳಿಕ ಹಗ್ಗಜಗ್ಗಾಟದ ನಡುವೆಯೇ, ತಹಶೀಲ್ದಾರ್ ಪೂರ್ಣಿಮಾ ಮತದಾನಕ್ಕೆ ಅನುಮತಿ ನೀಡಿದರು.

ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು. ಕಾಂಗ್ರೆಸ್ ಪರ ಬಿಜೆಪಿ, ಜೆಡಿಎಸ್, ಪಕ್ಷೇತರ ಸದಸ್ಯರು ಮತ ಚಲಾಯಿಸಿದರು. ಜ್ಯೋತಿ ಸಂತೋಷ್ ಒಟ್ಟು 10 ಮತಗಳನ್ನು ಪಡೆದರೆ, ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ 11 ಮತ ಗಳಿಸಿತು. ಭಾಗ್ಯಲಕ್ಷ್ಮೀ ಗೆಲುವು ಸಾಧಿಸಿದರೆ 1 ಮತಗಳ ಅಂತರದಲ್ಲಿ ಕಾಂಗ್ರೆಸ್ ಸೋಲಬೇಕಾಯಿತು.