ಬೆಂಗಳೂರು

ಪೊಲೀಸರನ್ನು ಸಹೋದರತ್ವದ ಭಾವನೆಯಿಂದ ನೋಡಬೇಕು.- ಡಾ.ಜಿ.ಪರಮೇಶ್ವರ್

ಬೆಂಗಳೂರು:- ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯಾದ್ಯಂತ ”ಮನೆ-ಮನೆಗೆ ಪೊಲೀಸ್” ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಇಂದು ಬೆಂಗಳೂರಿನ ಗೋವಿಂದರಾಜನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. ಈ ಕಾರ್ಯಕ್ರಮದ ಯಶಸ್ಸು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವರು ಮಾತನಾಡಿ, “ನಮ್ಮ ಪೊಲೀಸರು ಜನಸ್ನೇಹಿಯಾಗಬೇಕು. ಸಾರ್ವಜನಿಕರು ಪೊಲೀಸರನ್ನು ಸಹೋದರತ್ವದ ಭಾವನೆಯಿಂದ ನೋಡಬೇಕು. ಈ ನಿಟ್ಟಿನಲ್ಲಿ ನಾವೇ ಜನರ ಮನೆ ಬಾಗಿಲಿಗೆ ಹೋಗಿ, ಅವರ ಕಷ್ಟಗಳನ್ನು ಆಲಿಸಿ ಪರಿಹರಿಸಿದರೆ ಉತ್ತಮ ಅಭಿಪ್ರಾಯ ಮೂಡುತ್ತದೆ” ಎಂದರು.

ಪೊಲೀಸರು ತಮ್ಮ ದಿನನಿತ್ಯದ ಬೀಟ್ ಸಂದರ್ಭದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಯಾರು ಬಂದಿದ್ದಾರೆ, ಏನು ಕೆಲಸ ಮಾಡುತ್ತಾರೆ, ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಎಲ್ಲಾ ಡೇಟಾವನ್ನು ಬೆಂಗಳೂರು ಪೊಲೀಸರು ನಿರ್ವಹಿಸಲಿದ್ದಾರೆ. ನೆರೆಹೊರೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಮಕ್ಕಳಿಗೆ ತೊಂದರೆ ಅಥವಾ ಡ್ರಗ್ಸ್ ಚಟುವಟಿಕೆಗಳ ಬಗ್ಗೆ ಜನರು ಪೊಲೀಸರೊಂದಿಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬಹುದು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುವುದು ಮತ್ತು ಬೀಟ್ ಸಿಬ್ಬಂದಿಗಳಿಗೆ ಟ್ಯಾಬ್‌ಗಳನ್ನು ನೀಡಲಾಗುವುದು. ಇದು ಜನಪ್ರತಿನಿಧಿಗಳು, ಉದ್ಯಮಿಗಳು, ಸಾಹಿತಿಗಳಂತಹ ಸಾಫ್ಟ್ ಟಾರ್ಗೆಟ್’ಗಳ ಬಗ್ಗೆ ನಿಗಾವಹಿಸಲು ಸಹ ಸಹಾಯಕವಾಗಲಿದೆ ಎಂದು ಪರಮೇಶ್ವರ ತಿಳಿಸಿದರು.

ವಾಹನ ನಿಲುಗಡೆ ಸಮಸ್ಯೆ ಕುರಿತು ಮಾತನಾಡಿದ ಗೃಹ ಸಚಿವರು, ನಮ್ಮ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪ್ರತಿನಿತ್ಯ ಗಲಾಟೆಗಳಾಗುತ್ತಿವೆ. ಇದನ್ನು ನಿಯಂತ್ರಿಸಲು ಟೋಯಿಂಗ್ ವ್ಯವಸ್ಥೆಯನ್ನು ಮರುಜಾರಿಗೊಳಿಸಲಾಗುವುದು. ಪೊಲೀಸ್ ಸಿಬ್ಬಂದಿಗಳೇ ಟೋಯಿಂಗ್ ಕಾರ್ಯ ನಿರ್ವಹಿಸಲಿದ್ದಾರೆ. ಟೋಯಿಂಗ್‌ಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಹೊಸ ವಾಹನಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿದ ಸಚಿವರು, ಮಹಿಳೆಯರು ತೊಂದರೆಯಲ್ಲಿದ್ದಾಗ ಪೊಲೀಸರು ಕೂಡಲೇ ಸ್ಪಂದಿಸುತ್ತಿದ್ದಾರೆ. ಬೆಂಗಳೂರನ್ನು ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿ ಮಾಡುತ್ತೇವೆ. ನಿರ್ಭಯಾ ಯೋಜನೆಯಡಿ ನಗರದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 50 ಸೇಫ್ ಐ ಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರನ್ನು ಡ್ರಗ್ ಮುಕ್ತ ನಗರವನ್ನಾಗಿ ಮಾಡುತ್ತೇವೆ ಎಂದು ಅವರು ಘೋಷಿಸಿದರು. ತಮ್ಮ ಮಕ್ಕಳು ಮಾದಕದ್ರವ್ಯ ಬಳಕೆ ಸೇರಿದಂತೆ ದುಶ್ಚಟಗಳಿಗೆ ಸಿಲುಕಿದ್ದರೆ, ಮನೆಗಳಿಗೆ ಪೊಲೀಸರು ಬಂದಾಗ ಇಂತಹ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ಪರಮೇಶ್ವರ ಸಾರ್ವಜನಿಕರಿಗೆ ಕರೆ ನೀಡಿದರು.

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕುರಿತು ಗೃಹ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ಜಿಲ್ಲೆಗಳ ಎಸ್‌ಪಿ ಹಾಗೂ ಪೊಲೀಸ್ ಕಮಿಷನರ್‌ಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ ಪ್ರಗತಿ ಮತ್ತು ಸವಾಲುಗಳ ಬಗ್ಗೆ ಮಾಹಿತಿ ಪಡೆದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video