ರಾಮನಗರ:- ನಟರ ಈ ನಡೆಯಿಂದ ಚಿತ್ರರಂಗದಲ್ಲಿ ಯಾರಿಗೂ ಸರಿಯಾಗಿ ಕೆಲಸ ಸಿಗುತ್ತಿಲ್ಲ, ಹೊಟ್ಟೆಪಾಡು ನಡೆಯುವುದೂ ಕಷ್ಟ ಎನ್ನುವ ಪರಿಸ್ಥಿತಿ ತಲುಪಿದೆ ಎಂದು ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರೊಬ್ಬರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದು, ”ಸುದೀಪ್ ಏನು ದೊಡ್ಡ ಸ್ಟಾರಾ”ಎಂದು ಕೇಳಿದ್ದಾರೆ.
‘ಏನ್ ನಿಮ್ಗೆ ಹಣ ಕೊಡ್ತಿಲ್ವಾ, ನೀವು ಮಜಾ ಮಾಡಿಕೊಂಡಿದ್ರೆ, ಬಡವರ ಮನೆ ಮಕ್ಕಳು ಎಲ್ಲಿಗೆ ಹೋಗಬೇಕು, ಕಾರ್ಮಿಕರು, ನಿರ್ದೇಶಕರು ಎಲ್ಲಿಗೆ ಹೋಗಬೇಕು. ಥಿಯೇಟರ್ನವರು ಸಿನಿಮಾಗಳಿಲ್ಲದೇ ಸತ್ತೇ ಹೋಗಿದ್ದಾರೆ. ಬಾಡಿಗೆ, ಟ್ಯಾಕ್ಸ್ ಕಟ್ಟೋಕಾಗದೆ ಒದ್ದಾಡುತ್ತಿದ್ದಾರೆ. ಅದೆಲ್ಲ ಈ ನಟರಿಗೆ ಕಾಣಲ್ವಾ ಈಗಲಾದರೂ ಬುದ್ಧಿ ಕಲೀರಿ’ ಎಂದು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗರಂ ಆಗಿದ್ದಾರೆ.
ನಟರು ನಮ್ಮ ಫೋನ್ಗಳನ್ನ ಕಟ್ ಮಾಡ್ತಾರೆ. ಇಲ್ಲಿ ದುಡ್ಡಿನ ಪ್ರಶ್ನೆ ಅಲ್ಲ, ಇವತ್ತಿಗೂ ನೂರು ಸಿನಿಮಾ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗ ಅಂದರೆ ಎಲ್ಲರ ಬದುಕು. ಎಲ್ಲರೂ ಚೆನ್ನಾಗಿರಬೇಕು, ನಾನು ಅನೇಕ ನಟರಿಗೆ ಈ ಹಿಂದೆ ಅಡ್ವಾನ್ಸ್ ಕೊಟ್ಟಿದ್ದೀನಿ. ಅವರು ಈಗ ನಮ್ಮನ್ನ ಮೂಸಿ ಕೂಡ ನೋಡ್ತಿಲ್ಲ. ನಮ್ಮ ಫೋನ್ ತೆಗೀತಿಲ್ಲ. ಸುತ್ತ ಹತ್ತತ್ತು ಜನ ಬಾಡಿಗಾರ್ಡ್ಗಳು ಇರ್ತಾರೆ. ನಮ್ಮನ್ನ ಹತ್ತಿರವೂ ಸೇರಿಸ್ತಿಲ್ಲ ಎಂದಿದ್ದಾರೆ.
ಸಿನಿಮಾ ಮಾಡೋಕೆ ರೋಗನಾ: ಹಿಂದೆ ನಾವು ಅಣ್ಣಾವ್ರ ಹತ್ತಿರ ನೇರವಾಗಿ ಹೋಗಿ ಭೇಟಿಯಾಗಿ ಬರುತ್ತಿದ್ವಿ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಅವರ ಮನೆ ಗೇಟ್ ಹತ್ರ ಹೋಗಿ ನಿಲ್ಲಬೇಕು. ಒಂದು ವೇಳೆ ಆ ನಟರು ಇಲ್ಲ ಅಂದ್ರೆ ನಮ್ಮನ್ನ ಅಲ್ಲಿಂದ ಓಡಿಸುತ್ತಾರೆ. ಒಂದು ಕಾಫಿ, ಟೀಗೂ ಮರ್ಯಾದೆ ಇಲ್ಲ. ಅಲ್ಲಿಗೆ ಹೋದ್ರೆ ಬಾಡಿಗಾರ್ಡ್ಗಳು ಇರ್ತಾರೆ. ಅವರನ್ನ ನೋಡಿದ್ರೆ ಭಯ ಆಗುತ್ತೆ. ಆಗ ರಾಜ್ಕುಮಾರ್ ಅವರಿಗೆ ಯಾವ ಬಾಡಿಗಾರ್ಡ್ ಇರುತ್ತಿರಲಿಲ್ಲ. ನಟರು ಹಣ ಮಾಡಿಕೊಂಡಿದ್ದಾರೆ. ಅದು ನೂರು ವರ್ಷ ಆದ್ರೂ ಕರಗೋದಿಲ್ಲ. ಆದರೆ ಕೆಲಸಗಾರರಿಗೆ ಹಾಗಲ್ಲ, ದಿನಾ ಕೆಲಸ ಮಾಡಬೇಕು, ತಿನ್ನಬೇಕು. ಈಗ ಇಂಡಸ್ಟ್ರಿಯಲ್ಲಿ ಇದೇ ಸಮಸ್ಯೆ. ಒಬ್ಬ ನಟ ಮೂರು, ನಾಲ್ಕು ವರ್ಷ ಆದ್ರೂ ಸಿನಿಮಾ ಮಾಡಲ್ಲ. ‘ಯಾಕೆ ಮಾಡಲ್ಲ ರೋಗನಾ’ ಎಂದು ಗುಡುಗಿದ್ದಾರೆ.
Leave feedback about this