ಮಂಗಳೂರು:- ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಕೇಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ, ಎಸ್ಐಟಿ ರಚನೆಯಾಗಲಿ ಎಂದು ಆನೇಕರು ಆಗ್ರಹಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಕೂಡ ಟ್ವೀಟ್ ಮಾಡುವ ಮೂಲಕ ಸತ್ಯದ ಪರ ಧ್ವನಿಯೆತ್ತಿದ್ದಾರೆ.
ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಮತ್ತು ಮಹಿಳೆಯರ ನಾಪತ್ತೆ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ, ಧರ್ಮಸ್ಥಳ ಎಂಬುದು ಅನೇಕ ಮಂದಿಗೆ ಆರಾಧನೆಯ ಸ್ಥಳವಾಗಿದೆ. ಕರ್ನಾಟಕದ ಜನರು ಈ ಪೂಜ್ಯ ಸ್ಥಳವನ್ನು ಹೆಚ್ಚು ಗೌರವಿಸುತ್ತಾರೆ. ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ನಾನು ಆಶಿಸುತ್ತೇನೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ನಟಿ ರಮ್ಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು.
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ, ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ.
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದೀಗ ತನಿಖಾ ತಂಡವನ್ನ ರಚನೆ ಮಾಡಿದೆ. ಧರ್ಮಸ್ಥಳ ಆರೋಪಗಳ ತನಿಖೆಗಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಎಸ್‌ಐಟಿಯನ್ನು ರಚಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಮತ್ತು ನ್ಯಾಯಯುತ ತನಿಖೆ ನಡೆಸಲು ಅವರಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
Leave feedback about this