ಬೆಂಗಳೂರು

ಭೀಮನ ಅಮವಾಸ್ಯೆ ಬಂದರೆ ಅಣ್ಣಾವ್ರ ನೆನಪು.!

ಬೆಂಗಳೂರು:- ವರನಟ, ನಟಸಾರ್ವಭೌಮ, ರಣಧೀರ ಕಂಠೀರವ ಡಾ.ರಾಜ್ ಕುಮಾರ್ ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಕರಾಳ ದಿನಕ್ಕೆ ಭರ್ತಿ 25 ವರ್ಷ ತುಂಬಿದೆ. ಅಣ್ಣಾವ್ರ ನಿವಾಸದಿಂದ ರಾತ್ರೋ ರಾತ್ರಿ ವೀರಪ್ಪನ್ ಅಪಹರಣ ಮಾಡಿದ್ದನು. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಅಭಿಮಾನಿಗಳು ತಲ್ಲಣಗೊಳ್ಳುವಂತೆ ಮಾಡಿತ್ತು. ಇದಾದ ಬಳಿಕ ಬರೋಬ್ಬರಿ 108 ದಿನಗಳ ಕಾಲ ಡಾ. ರಾಜ್ ವೀರಪ್ಪನ್ ವಶದಲ್ಲಿದ್ದರು. ಹಲವು ಸುತ್ತಿನ ಸಂಧಾನದ ಬಳಿಕ ಅಣ್ಣಾವರನ್ನು ಬಿಡುಗಡೆ ಮಾಡಿದ್ದನು.

ಪ್ರತಿವರ್ಷ ಭೀಮನ ಅಮವಾಸ್ಯೆ ಬಂದರೆ ಅಣ್ಣಾವ್ರ ನೆನಪು ಕಾಡದೆ ಇರದು, ಸರಿಯಾಗಿ 25 ವರ್ಷಗಳ ಹಿಂದೆ ಆ ಕರಾಳ ರಾತ್ರಿಯಂದೇ ಕಾಡುಗಳ್ಳ ವರನಟ ರಾಜ್‌ ಕುಮಾರ್‌ ಅವರನ್ನು ಅಪಹರಿಸಿದ್ದನು. ರಾಜ್ ಅವರನ್ನು ವೀರಪ್ಪನ್‌‌‌ ಅಪಹರಣ ಮಾಡಿ ಬರೋಬ್ಬರಿ 108 ದಿನಗಳ ಕಾಲ ಕಾಡಿನಲ್ಲಿಟ್ಟಿದ್ದನು. ರಾಜ್‌ಕುಮಾರ್ ಅವರನ್ನು ಹೊರ ತರುವುದಕ್ಕೆ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ದೊಡ್ಡಮಟ್ಟದ ಪ್ರಯತ್ನವನ್ನೇ ಮಾಡಿದ್ದರು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರು ವರ್ಷವೇ ವೀರಪ್ಪನ್ ಕಡೆಯಿಂದ ಅಣ್ಣಾವ್ರು ಕಿಡ್ನ್ಯಾಪ್ ಆದರು.‌

ಡಾ.ರಾಜ್‌ ಕುಮಾರ್‌ ಅವರು ನಾಲ್ಕು ದಿನ ಸಂತೋಷದಿಂದ ಕಾಲಕಳೆಯಲು ತಮಿಳುನಾಡಿನ ತಾಳವಾಡಿಯ ತೋಟದ ಮನೆಯಲ್ಲಿ ತಂಗಿದ್ದರು. ಭಾನುವಾರ ರಾತ್ರಿ 9.30ರಲ್ಲಿ ಊಟ ಮಾಡಿ ಡಾ.ರಾಜ್‌ ಅವರು ಟಿ.ವಿ ನೋಡುತ್ತಿದ್ದಾಗ, ಶಸ್ತ್ರಸಜ್ಜಿತರಾಗಿದ್ದ ಸುಮಾರು 12 ಮಂದಿ ವೀರಪ್ಪನ್‌ ಸಹಚರರು ಡಾ.ರಾಜ್‌ ಅವರ ತೋಟಮನೆಗೆ ಮುತ್ತಿಗೆ ಹಾಕಿದರು. ಡಾ.ರಾಜ್‌ಕುಮಾರ್‌, ಅವರ ಅಳಿಯ ಎಸ್‌.ಎ ಗೋವಿಂದರಾಜ್‌, ಡಾ.ರಾಜ್‌ ಅವರ ಸಂಬಂಧಿ ನಾಗೇಶ್‌ ಮತ್ತು ನಾಗಪ್ಪ ಎನ್ನುವವರನ್ನು ವೀರಪ್ಪನ್‌ ಸಹಚರರು ಅಪಹರಿಸಿದ್ದಾರೆ. ಈ ಅಪಹರಣದ ನೇತೃತ್ವವನ್ನು ಸ್ವತಃ ವೀರಪ್ಪನ್‌ನೇ ವಹಿಸಿದ್ದ. ಡಾ.ರಾಜ್‌ ಹಾಗೂ ಇತರರನ್ನು ತನ್ನ ವಶಕ್ಕೆ ತೆಗೆದುಕೊಂಡ ವೀರಪ್ಪನ್‌ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಕೊಡುವಂತೆ ತಿಳಿಸಿ ಆಡಿಯೋ ಕ್ಯಾಸೆಟ್‌ ಒಂದನ್ನು ಕಳುಹಿಸಿಕೊಟ್ಟ. ಈ ವಿವರಗಳನ್ನು ಕೃಷ್ಣ ಅಂದು ಬೆಳಗ್ಗೆ ಸುದ್ದಿಗಾರರಿಗೆ ತಿಳಿಸಿದ್ದರು.

ಕೃಷ್ಣರವರು ಟೆನಿಸ್ ಆಡುತ್ತಿದ್ದಾಗ ಅವರ ಜೊತೆಗಿದ್ದ ರಾಘವೇಂದ್ರ ಶಾಸ್ತ್ರಿ ಎಂಬುವವರ ಮೊಬೈಲ್‌ಗೆ ಕರೆ ಬಳಿಕ ಬರುತ್ತೆ, ಆ ಕಡೆಯಿಂದ ವೀರಪ್ಪನ್ ರಾಜ್‌ಕುಮಾರ್‌ ಅವರ ಬಿಡುಗಡೆಗೆ 50 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಾನೆ. ಜತೆಗೆ ಬೆಂಗಳೂರು ಜೈಲಿನಲ್ಲಿರುವ ತನ್ನ ಸಹಚರರನ್ನು ಬಿಡುಗಡೆ ಮಾಡಬೇಕು ಎಂದು ಬೇಡಿಕೆಯೂ ಇಡುತ್ತಾನೆ. ರಾಜ್‌ ಕುಮಾರ್‌ ಅಪಹರಣಕ್ಕೂ ಮುನ್ನ ವನ್ಯಜೀವಿ ಫೋಟೊಗ್ರಾಪರ್‌ಗಳಾದ ಕೃಪಾಕರ್‌ ಮತ್ತು ಸೇನಾನಿಯನ್ನು ಅಪಹರಿಸಿದ್ದ. ನಂತರ ಪ್ರಾದ್ಯಾಪಕರೊಬ್ಬರನ್ನು ಅಪಹರಿಸಿದ್ದ. ಇವರಿಂದ ಹಣ ಸಿಗುವುದಿಲ್ಲ ಎಂದು ತಿಳಿದು ಗಣ್ಯರ ಅಪಹರಣಕ್ಕೆ ಮುಂದಾಗಿದ್ದ.

2000, ಜುಲೈ 30ರಂದು ಗಾಜನೂರಿನ ಮನೆಯಿಂದ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದನು, 2004ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ವಿಶೇಷ ಪೊಲೀಸ್‌ ಕಾರ್ಯಪಡೆ ವೀರಪ್ಪನ್‌ನನ್ನು ಹತ್ಯೆ ಮಾಡಿತ್ತು. ಇದಾದ ಎರಡು ವರ್ಷಗಳ ನಂತರ 2006ರಲ್ಲಿ ರಾಜ್‌ಕುಮಾರ್‌ ವಿಧಿವಶರಾದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video