ದೆಹಲಿ:- ರಾಷ್ಟ್ರ ರಾಜಧಾನಿ ದೆಹಲಿಯ ಕರ್ನಾಟಕ ಭವನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿಶೇಷ ಕರ್ತವ್ಯ ಅಧಿಕಾರಿಗಳ ನಡುವೆ ನಡೆದ ಜಟಾಪಟಿ ತಾರಕಕ್ಕೇರಿದ್ದು, ಈ ಸಂಬಂಧ ಡಿಕೆಶಿ ಅವರ ವಿಶೇಷ ಕರ್ತವ್ಯ ಅಧಿಕಾರಿ ಆಂಜನೇಯ ದೂರು ನೀಡಿದ್ದಾರೆ.
ವಿಶೇಷ ಕರ್ತವ್ಯ ಅಧಿಕಾರಿ ಆಂಜನೇಯ ಅವರು ಮುಖ್ಯಮಂತ್ರಿಯವರ ಅಧಿಕಾರಿ ಮೋಹನ್ ಕುಮಾರ್ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಿವಾಸಿ ಆಯುಕ್ತರಿಗೆ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಆಂಜನೇಯ ಅವರು, ಮೋಹನ್ ಕುಮಾರ್ ಬಂದಾಗಿನಿಂದ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೇ ಕಚೇರಿಯಲ್ಲಿ ಸಿಬ್ಬಂದಿ, ಜನರ ಮುಂದೆ ನನಗೆ ಬೂಟಿನಲ್ಲಿ ಹೊಡೆಯುವುದಾಗಿ ದರ್ಪ ಮೆರೆದಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ಈ ಬಗ್ಗೆ ಇಲಾಖೆ ವಿಚಾರಣೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡುವಂತೆ ಆಂಜನೇಯ ಮನವಿ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿ ಮೋಹನ್ ಕುಮಾರ್.ಸಿ. ಯವರು ತಮ್ಮ ಅಧಿಕಾರ ದರ್ಪ ತೋರಿಸಿ ಹೊಡೆಯಲು ಬಂದಿರುವ ಕುರಿತು ಈ ದೂರು ನೀಡುತ್ತಿದ್ದೇನೆ. ಈ ಮೂಲಕ ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಮೋಹನ್ ಕುಮಾರ್ ಅವರು ಇಂದು ಬೂಟು ಕಳಚಿಕೊಂಡು ಹೋಡಿತ್ತೀನಿ ಅಂತ ಅವರ ಚೇಂಬರ್ ನಲ್ಲಿ ಹೇಳಿದ್ದು, ಕಚೇರಿಯ ಹೊರ ಅವರಣದಲ್ಲಿ ಎಲ್ಲರ ಎದುರಿಗೆ ಹಾಗೂ ಪ್ರಮೀಳಾ ಇವರ ಸಮ್ಮುಖದಲ್ಲಿ ಹೊಡೆಯಲು ಬಂದಿರುತ್ತಾರೆ.
ನಾನು ಒಬ್ಬ ಗ್ರೂಪ್ ಬಿ ಅಧಿಕಾರಿಯಾಗಿದ್ದು, ಉಪ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇನೆ. ಈ ಹಿನ್ನೆಲೆಯಲ್ಲಿ ನನೆಗೆ ಏನಾದರೂ ಅಪಘಾತ ಆದರೆ ಮೋಹನ್ ಕುಮಾರ್.ಸಿ ಇವರೇ ಕಾರಣ ಹಾಗೂ ಇವರ ಈ ಹಿಂದೆ ಇವರ ಸೇವಾ ಪುಸ್ತಕವನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಎಂ. ಎಂ. ಜೋಷಿ, ಅವರಿಗೆ ಹೊಡೆದಿರುವುದು ಹಾಗೂ ಮೇಲಾಧಿಕಾರಿಗಳಿಗೆ ಯಾವ ರೀತಿ ಮರ್ಯಾದೆ ಇಲ್ಲದೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಎನ್ನುವ ಅಹಂನಲ್ಲಿ ಆಡಳಿತ ಇವರು ಹೇಳಿದ ರೀತಿಯಲ್ಲಿಯೇ ನಡೆಯಬೇಕು.
ಇದೇ ವಿಷಯಕ್ಕೋಸ್ಕರ ನಾನು ಕಚೇರಿ ಅಧೀಕ್ಷಕ -ಆಡಳಿತ (ಕರ್ನಾಟಕ ಭವನ) ದಿಂದ ವರ್ಗಾವಣೆ ಮಾಡಿಸಿ ನಿವಾಸಿ ಆಯುಕ್ತರವರ ಕಛೇರಿಯ ಅಧೀಕ್ಷಕನಾಗಿ ಕರ್ತವ್ಯ ನಿರ್ವಹಿಸಲು ಹಾಗೂ ಉಪ ಸಮನ್ವಯ ಅಧಿಕಾರಿ ಹುದ್ದೆಯ ಸೇವಾ ಹಿರಿತನದಲ್ಲಿ ಹಿರಿಯನಾದರೂ ಸಹ ಇವರ ಆಡಳಿತ ಅವಧಿಯಲ್ಲಿ ನಾನು ಲೆಕ್ಕಾಧಿಕಾರಿ (ಪ್ರಭಾರ) ನಾಗಿ ಕರ್ತವ್ಯ ನಿರ್ವಹಿಸದಿರುವಂತೆ ನನ್ನನ್ನು ಆ ಹುದ್ದೆಗೆ ವರ್ಗಾವಣೆ ಮಾಡದೇ ಇರಲು ಮೂಲ ಕಾರಣಕರ್ತರಾದವರು.
ಈ ಹಿನ್ನೆಲೆಯಲ್ಲಿ ನಾನು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಸದರಿಯವರ ಸೇವಾ ಅವಧಿಯಲ್ಲಿ ಅವರ ಮೇಲೆ ನಡೆದಿರುವ ಇಲಾಖಾ ವಿಚಾರಣೆ, ಮುಂಬಡ್ತಿ ಹಾಗೂ ನನಗೆ ಏಕ ವಚನಲ್ಲಿ ಬೂಟು ಕಳಚಿಕೊಂಡು ಹೊಡೆಯುತ್ತೇನೆ ಎಂದು ನನ್ನ ಮಾನ ಮರ್ಯಾದೆಯನ್ನು ಕಳೆದಿರುವ ಇವರ ಮೇಲೆ ಇಲಾಖಾ ವಿಚಾರಣೆಯನ್ನು ನಡೆಸಿ ನನಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ನಾನು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಆಂಜನೇಯ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
Leave feedback about this