ಬೆಂಗಳೂರು

ಸುರ್ಜೇವಾಲಾ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ಮಾಡುವುದು ಸಂವಿಧಾನ ಬಾಹಿರ ಕೃತ್ಯ.- ಸಚಿವ ರಾಜಣ್ಣ

ಬೆಂಗಳೂರು:- ಕಳೆದ ಎರಡು ವಾರ ರಾಜ್ಯದಲ್ಲಿ ಠಿಕಾಣಿ ಹೂಡಿದ್ದ ಸುರ್ಜೇವಾಲ, ಶಾಸಕರ ಸಭೆ ನಡೆಸಿ ಚರ್ಚಾ ವಿಷಯವಾಗಿದ್ದರು. ಇದರ ಮಧ್ಯೆ, ಕೆಲವು ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಸುರ್ಜೆವಾಲಾ ಬುಲಾವ್ ಹೊರಡಿಸಿದ್ದರು ಎಂಬ ಆರೋಪವಿದೆ, ಖಾಸಗಿ ಹೊಟೇಲ್ನಲ್ಲಿ ಕೆಲ ಪ್ರಮುಖ ಹಿರಿಯ ಅಧಿಕಾರಿಗಳ ಜೊತೆ ಸುರ್ಜೇವಾಲಾ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಚಿವರಿಂದ ಅಧಿಕಾರಿಗಳಿಗೆ ಎಚ್ಚರಿಕೆ: ಸುರ್ಜೇವಾಲಾ ಅಧಿಕಾರಿಗಳಿಗೆ ಕರೆ ಮಾಡಿದ್ದ ಬಗ್ಗೆ ಕೆಲ ಸಚಿವರಿಗೆ ಮಾಹಿತಿ ದೊರೆತಿದೆ. ಮಾಹಿತಿ ಸಿಕ್ಕ ತಕ್ಷಣ ಕೆಲ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುರ್ಜೇವಾಲಾಗೆ ಸಚಿವರ, ಶಾಸಕರ ಸಭೆ ಮಾಡುವ ಅವಕಾಶ ಇದೆ. ಆದರೆ, ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಯಾವುದೇ ಸೂಚನೆ ನೀಡುವುದು ಸರಿಯಲ್ಲ. ನಿಯಮಗಳ ಪ್ರಕಾರ ಕೂಡ ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸುವುದು ತಪ್ಪು. ನಿಯಮಬದ್ಧವಾಗಿ ಸುರ್ಜೇವಾಲಾಗೆ ಅಧಿಕಾರಿಗಳ ಸಭೆ ನಡೆಸಲು ಅವಕಾಶವೇ ಇಲ್ಲ. ಕಾನೂನು ಕೂಡ ಹೀಗೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕೆಲ ಸಚಿವರು ಖಡಕ್ ಆಗಿಯೇ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಶಾಸಕರನ್ನು ಕರೆದು ಸುರ್ಜೇವಾಲಾ ಮೀಟಿಂಗ್ ಮಾಡಬಹುದು. ಆದರೆ, ಸರ್ಕಾರಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತಾರೆ ಎಂದರೆ ಅದು ಸಂವಿಧಾನ ಬಾಹಿರ ಕೃತ್ಯ ಆಗುತ್ತದೆ. ಅಧಿಕಾರಿಗಳನ್ನು ಕರೆದು ಅವರ ಜೊತೆಗೆ ಚರ್ಚೆ ಮಾಡುವುದು ಸಂವಿಧಾನ ವಿರೋಧಿ ಕೆಲಸ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಹಿಂದೆ ಒಮ್ಮೆ ಅದೇ ತರಹ ಸಭೆ ಮಾಡಿದ್ದರು. ಆದರೆ, ಆಗ ಅಲ್ಲಿ ಸುರ್ಜೇವಾಲಾ ಆಹ್ವಾನ ನೀಡಿದ್ದಾಗಿರಲಿಲ್ಲ. ಶಾಂಗ್ರಿಲಾ ಹೊಟೇಲ್ನಲ್ಲಿಯೇ ಸುರ್ಜೆವಾಲಾ ವಾಸ್ತವ್ಯ ಇದ್ದರು. ಡಿಸಿಎಂ ಬೆಂಗಳೂರು ಅಧಿಕಾರಿಗಳ ಸಭೆ ನಡೆಸುವಾಗ ಸುರ್ಜೆವಾಲಾ ಬಂದಿದ್ದರು. ಆದರೆ, ಈಗ ಅಧಿಕಾರಿಗಳನ್ನು ತಾವೇ ಸ್ವತಃ ಕರೆದಿದ್ದಾರೆ ಎಂದರೆ ಅದು ಸಂವಿಧಾನದ ಬಾಹಿರ. ನಮ್ಮ ಶಾಸಕರನ್ನು, ಸಚಿವರನ್ನು ಕರೆದು ಬೇಕಾದರೆ ಏನಾದರೂ ಮಾಹಿತಿ ಪಡೆದುಕೊಳ್ಳಬಹುದು. ಆದರೆ, ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲು ಕಾನೂನುಬದ್ಧ ಅವಕಾಶ ಇಲ್ಲ ಎಂದು ರಾಜಣ್ಣ ಹೇಳಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video