ಬೆಂಗಳೂರು:- ಮುಂಬರುವ ಮೇ 2028ರಲ್ಲಿ ನಡೆಯಬೇಕಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಲೇ, ಯಡಿಯೂರಪ್ಪ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಮೂಲಕ, ಎಲ್ಲರ ಹುಬ್ಬೇರುವಂತೆ ಮಾಡುವುದರ ಜೊತೆಗೆ, ಜೆಡಿಎಸ್ ಜೊತೆಗಿನ ಮೈತ್ರಿಯ ಸಾಧ್ಯತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಶವಂತಪುರ ಅಸೆಂಬ್ಲಿ ಕ್ಷೇತ್ರಕ್ಕೆ ಯಡಿಯೂರಪ್ಪ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದಾರೆ. ಬಿಜೆಪಿ ನಾಯಕ ಕೆಆರ್ ಇಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಯಶವಂತಪುರ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಬಿಎಸ್ವೈ ಘೋಷಣೆಯನ್ನು ಮಾಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ಸದ್ಯ ಬಿಜೆಪಿಯ ಹಿಡಿತದಲ್ಲಿ ಇದ್ದರೂ ಇಲ್ಲದಂತಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಗೆದ್ದಿದ್ದ ಎಸ್.ಟಿ.ಸೋಮಶೇಖರ್, ಈಗ ಬಿಜೆಪಿ ಜೊತೆಯಲ್ಲಿಲ್ಲ. ಈಗಾಗಲೇ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರು ತಮ್ಮ ಮೂಲ ಕಾಂಗ್ರೆಸ್ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ರುದ್ರೇಶ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಅವರ ನಿವಾಸಕ್ಕೆ ಶುಭ ಕೋರಲು ಯಡಿಯೂರಪ್ಪ ಹೋಗಿದ್ದರು. ಆ ವೇಳೆ, ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ.ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ರುದ್ರೇಶ್ ಅವರಿಗೆ ಜನರ ಆಶೀರ್ವಾದವೂ ಸಿಗುವಂತೆ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಅವರ ಆಯ್ಕೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತಂದೆಯ ಸ್ಥಾನದಲ್ಲಿರುವ ಯಡಿಯೂರಪ್ಪನವರ ಆಶೀರ್ವಾದವಿದ್ದರೆ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ದನಿದ್ದೇನೆ. ಜೆಡಿಎಸ್ ಜೊತೆ ಮೈತ್ರಿ ಇರುವುದರಿಂದ ಗೆಲ್ಲುವ ವಿಶ್ವಾಸವಿದೆ ಎಂದು ರುದ್ರೇಶ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
Leave feedback about this