ಮಂಗಳೂರು:- ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ಹಲವೆಡೆ ಶವಗಳನ್ನು ಹೂತಿರುವುದಾಗಿ ಅನಾಮಿಕ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. (ವಿಶೇಷ ತನಿಖಾ ದಳ) ಅಧಿಕಾರಿಗಳ ಮುಂದೆ ಹಾಜರಾದ ಅನಾಮಿಕ ವ್ಯಕ್ತಿ, 13 ಸ್ಥಳಗಳನ್ನು ಗುರುತಿಸಿದಂತೆ ಸ್ಥಳ ಮಹಜರು ನಡೆಸಲಾಗಿದೆ.
ಜು.27 ರಂದು ಮಂಗಳೂರಿನಲ್ಲಿ ಅನಾಮಿಕನ ಸಂಪೂರ್ಣ ಹೇಳಿಕೆ ಪಡೆದು ಪ್ರಕರಣವನ್ನು ಚುರುಕುಗೊಳಿಸಿದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸಿ.ಎ.ಸೈಮನ್ ಹಾಗೂ ಅಧಿಕಾರಿಗಳ ತಂಡವು ಬೆಳಗ್ಗೆಯೇ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದರು. ಅನಾಮಿಕ ತನ್ನ ಪರ ನ್ಯಾಯವಾದಿಗಳ ತಂಡದೊಂದಿಗೆ ಬೆಳಗ್ಗೆ 11ಕ್ಕೆ ಅಧಿಕಾರಿಗಳ ಮುಂದೆ ಹಾಜರಾದ. ಕೆಲವು ತಾಸಿನ ವಿಚಾರಣೆ ಬಳಿಕ ದಾಖಲೆ ಪತ್ರದೊಂದಿಗೆ ಬಿಗಿ ಭದ್ರತೆಯಲ್ಲಿ ಮಧ್ಯಾಹ್ನ 1ಕ್ಕೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕರೆತರಲಾಯಿತು.
ದೂರುದಾರ ತಲೆ ಬುರುಡೆಯೊಂದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ. ಎಲ್ಲರೂ ಅದೇ ಸ್ಥಳದ ಮಹಜರು ಅಂದುಕೊಂಡಿದ್ದಾಗಲೇ, ನೇತ್ರಾವತಿ ಸ್ನಾನಘಟ್ಟಕ್ಕೆ ತಾಗಿಕೊಂಡು ಇರುವಂತೆ ಕೆಳಭಾಗದ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಅಧಿಕಾರಿಗಳನ್ನು ಕರೆದೊಯ್ದ ಅನಾಮಿಕ, 8 ಪ್ರದೇಶಗಳನ್ನು ಗುರುತಿಸಿದ. ಹೂತಿಟ್ಟ ಸ್ಥಳವನ್ನು ಕಾರ್ಡೆನಿಂಗ್ ಟೇಪ್ ಬಳಸಿ ಗುರುತಿಸಲಾಯಿತು.
ಮಧ್ಯಾಹ್ನದ ಬಳಿಕ 5 ಸ್ಥಳ ಗುರುತಿಸಲಾಯಿತು, ಸಂಜೆ 4.30ಕ್ಕೆ ನೇತ್ರಾವತಿ ಸೇತುವೆಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯ ಅಂಚಿನಲ್ಲೇ ಮೂರು ಸ್ಥಳ ಗುರುತಿಸಿರುವುದು ಅಚ್ಚರಿಗೆ ಕಾರಣವಾಯಿತು. ನೂರಾರು ಮಂದಿ ರಸ್ತೆಯಲ್ಲಿ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದ ಕಾರಣ ಹೆದ್ದಾರಿಯಲ್ಲಿ ಕೆಲಹೊತ್ತು ತಡೆ ಉಂಟಾಯಿತು.
ನೇತ್ರಾವತಿ ಅಜಿಕುರಿ ರಸ್ತೆಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಂತೆ ಸುಮಾರು 5 ಸೆಂಟ್ಸ್ ಸ್ಥಳವನ್ನು ಗುರುತಿಸುವ ಮೂಲಕ ಒಟ್ಟು 13 ಸ್ಥಳಗಳನ್ನು ಒಂದು ದಿನದಲ್ಲಿ ಮಹಜರು ನಡೆಸಲಾಯಿತು.
ಅಜಿಕುರಿ ರಸ್ತೆಯಲ್ಲಿ 5 ಸೆಂಟ್ಸ್ ವ್ಯಾಪ್ತಿಯಲ್ಲಿ ಅನಾಮಿಕ ಗುರುತಿಸಿದ ಸ್ಥಳವನ್ನು ಎ.ಎನ್.ಎಫ್. (ನಕ್ಸಲ್ ನಿಗ್ರಹ ಪಡೆ) ತಂಡದ ಸಹಕಾರದೊಂದಿಗೆ ಡ್ರೋನ್ ಮೂಲಕ ಸ್ಥಳ ಮಹಜರು ಮಾಡಿ ಪ್ರದೇಶದ ಚಿತ್ರ ಹಾಗೂ ವೀಡಿಯೋ ಚಿತ್ರೀಕರಣದ ಮೂಲಕ ದಾಖಲಿಸಲಾಯಿತು. ಸಂಜೆ 5.40ರ ಸುಮಾರಿಗೆ ಅಂತಿಮವಾಗಿ ಕನ್ಯಾಡಿಯ ಖಾಸಗಿ ಜಾಗವೊಂದಕ್ಕೆ ಅನಾಮಿಕ ಸ್ಥಳ ಮಹಜರಿಗೆ ಕರೆದೊಯ್ದಿದ್ದು, ಇಲ್ಲಿ ನೇತ್ರಾವತಿ ಕಿನಾರೆಯ ಮತ್ತೊಂದು ಪ್ರದೇಶಕ್ಕೆ ತೆರಳಲಾಯಿತು. ಸಂಜೆಯಾದ ಕಾರಣ ಸ್ಥಳ ವೀಕ್ಷಿಸಿದ್ದು, ಮಹಜರು ಆಗಬೇಕಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ 13 ಸ್ಥಳಗಳಿಗೆ ಎ.ಎನ್.ಎಫ್. ತಂಡ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ.
Leave feedback about this