ಬೆಂಗಳೂರು:- ಕಳೆದ ಕೆಲ ತಿಂಗಳಿನಿಂದ ನನ್ನ ಹೆಸರು, ಪೋಟೊ ಬಳಸಿಕೊಂಡು ನಕಲಿ ಅಕೌಂಟ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗುತ್ತಿದೆ ಎಂದು ಹಿರಿಯ ನಟ, ನಿರ್ದೇಶಕ ಎಸ್ ನಾರಾಯಣ ಅವರು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ, ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಸುದೀಪ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ, ಈ ಕುರಿತು ನನಗೆ ಐಡಿಯಾ ಇರಲಿಲ್ಲ. ನನ್ನ ಸ್ನೇಹಿತರು ಗಮನಕ್ಕೆ ತಂದಿದ್ದಾರೆ. ಸುಮಾರು ಐದಾರು ತಿಂಗಳಿಂದ ಈ ರೀತಿ ಮಾಡಿದ್ದಾರೆ. ನಾಲ್ಕೈದು ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಪೋಸ್ಟ್ ಮಾಡಿದವರ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನನ್ನ ಹೆಸರು ಬಳಸಿ ಸೃಷ್ಟಿಸಿರುವ ಈ ಅಕೌಂಟ್ನಲ್ಲಿ ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ.
ರಾಜ್ಯದಲ್ಲಿ ಇದು ಹೆಚ್ಚಾಗುತ್ತಿದ್ದು, ಕನ್ನಡಿಗರಿಗೆ ಅವಮಾನವಾಗಿದೆ. ಒಂದು ಚೌಕಟ್ಟನ್ನು ದಾಟಬಾರದು, ತೇಜೋವಧೆ ಮಾಡಬಾರದು. ಎಲ್ಲರ ಜೊತೆ ನನಗೆ ಉತ್ತಮ ಸಂಬಂಧವಿದೆ ಎಂದ ಅವರು, ಹಿಂದಿನಿಂದಲೂ ಫ್ಯಾನ್ಸ್ ವಾರ್ ಇತ್ತು, ಆದರೆ, ಈ ರೀತಿ ಮಿತಿ ಮೀರಿರಲಿಲ್ಲ. ಇದು ಅಸಹ್ಯಕಾರಿ ಬೆಳವಣಿಗೆ, ನಾವು ತಲೆತಗ್ಗಿಸುವಂತೆ ಆಗುತ್ತಿದೆ. ಪ್ರತಿಯೊಬ್ಬರು ಕೂಡ ನಾಗರಿಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಮಾನವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿಯಬೇಕು.
ವಾಣಿಜ್ಯ ಮಂಡಳಿ ಈ ಬಗ್ಗೆ ಏನು ಮಾಡುತ್ತೆ ಎಂಬುದನ್ನು ನೋಡುತ್ತೇನೆ. ಉದ್ಯಮ ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಯಾವುದೇ ಕಲಾವಿದರ ಅಭಿಮಾನಿಗಳು ನನ್ನ ಟಾರ್ಗೆಟ್ ಮಾಡಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
Leave feedback about this