ಉಡುಪಿ:- ಜಿಲ್ಲೆಯ ಕಾಪು ತಾಲೂಕಿನ ಎಣ್ಣೆಹೊಳೆ ಗ್ರಾಮದವರಾದ ಇವರು 1995ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಬಳಿಕ ಮುಂಬೈನಲ್ಲಿ ಭೂಗತ ಲೋಕದೊಂದಿಗೆ ಸಂಘರ್ಷಕ್ಕಿಳಿದ ನಾಯಕ, ಅನೇಕ ಎನ್ಕೌಂಟರ್ಗಳನ್ನು ಮಾಡಿ ದೇಶಾದ್ಯಂತ ಜನಪ್ರಿಯತೆ ಗಳಿಸಿದರು. ತಮ್ಮ ವೃತ್ತಿ ಜೀವನದುದ್ದಕ್ಕೂ ಅಪರಾಧ ಚಟುವಟಿಕೆಯನ್ನು ತಡೆಗಟ್ಟಲು ಶ್ರಮಿಸಿದ ಸೂಪರ್ ಕಾಪ್ ಇವರು.
ಮುಂಬೈ ಪೊಲೀಸ್ ಎನ್ಕೌಂಟರ್ ಸ್ಪೆಶಲಿಸ್ಟ್ ಎಂದೇ ಭಾರತದಾದ್ಯಂತ ಖ್ಯಾತರಾದ ಇವರೆ ನಮ್ಮ ಕನ್ನಡದ ಕುಡಿ ದಯಾನಾಯಕ್.
ಇವರು ಸೇವೆಯಿಂದ ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ತಮ್ಮ ನಿವೃತ್ತಿಯನ್ನು ಅಧಿಕೃತ ಎಕ್ಸ್ ಪೋಸ್ಟ್ನಲ್ಲಿ ಘೋಷಿಸಿರುವ ದಯಾ ನಾಯಕ್, “ಹೆಮ್ಮೆ ಮತ್ತು ಕೃತಜ್ಞತೆಯ ಭಾವನೆ”ಯಿಂದ ನಿವೃತ್ತರಾಗುತ್ತಿರುವುದಾಗಿ ಹೇಳಿದ್ದಾರೆ.
ನಿವೃತ್ತಿಗೂ ಎರಡು ದಿನಗಳ ಮೊದಲು ದಯಾ ನಾಯಕ್ ಎಸಿಪಿಯಾಗಿ ಬಡ್ತಿ ಪಡೆದುಕೊಂಡಿದ್ದರು. YES,,, ಮುಂಬೈ ಪೊಲೀಸ್ನಲ್ಲಿ ಎನ್ಕೌಂಟರ್ ಸ್ಪೆಶಲಿಸ್ಟ್ ಎಂದೇ ಖ್ಯಾತರಾಗಿದ್ದ ಉಡುಪಿ ಮೂಲದ ಪೊಲೀಸ್ ಅಧಿಕಾರಿ ದಯಾ ನಾಯಕ್, 31 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಮಹಾರಾಷ್ಟ್ರ ರಾಜ್ಯಕ್ಕೆ ಮತ್ತು ದೇಶಕ್ಕೆ ಸೇವೆ ಸಲ್ಲಿಸಿರುವುದು ಹೆಮ್ಮೆ ತಂದಿದೆ” ಎಂದು ಹೇಳಿದ್ದಾರೆ.
ನಿವೃತ್ತಿ ಘೋಷಣೆ: “ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಸಮರ್ಪಿತ ಸೇವೆಯ ನಂತರ, ನಾನು ಇಂದು ಆಳವಾದ ಹೆಮ್ಮೆ ಮತ್ತು ಕೃತಜ್ಞತೆಯಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಪೂರ್ಣ ವೃತ್ತಿಜೀವನಕ್ಕೆ ಸೂಕ್ತವಾದ ಗೌರವ ಎಂಬಂತೆ, ನಿವೃತ್ತಿಗೆ ಕೇವಲ ಎರಡು ದಿನಗಳ ಮೊದಲು ನನಗೆ ಸಹಾಯಕ ಪೊಲೀಸ್ ಆಯುಕ್ತ ಹುದ್ದೆಗೆ ಬಡ್ತಿ ನೀಡಲಾಗಿದೆ.
ಸುದೀರ್ಘ ವರ್ಷಗಳಲ್ಲಿ ವಿವಿಧ ಹುದ್ದೆಗಳು ಮತ್ತು ಜವಾಬ್ದಾರಿಗಳಲ್ಲಿ ನನ್ನ ರಾಜ್ಯ ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸಿರುವುದು ನನಗೆ ಗೌರವದ ಸಂಗತಿಯಾಗಿದೆ. ಈ ವೃತ್ತಿ ಜೀವನದ ಪ್ರಯಾಣದುದ್ದಕ್ಕೂ ಬೆಂಬಲ ನೀಡಿದ್ದಕ್ಕಾಗಿ ನನ್ನ ಹಿರಿಯರು, ಸಹೋದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನಾನು ಜೀವನದ ಮುಂದಿನ ಅಧ್ಯಾಯಕ್ಕೆ ಕಾಲಿಡುತ್ತಿದ್ದಂತೆ, ಸಮವಸ್ತ್ರವು ನನ್ನಲ್ಲಿ ತುಂಬಿರುವ ಮೌಲ್ಯಗಳು ಮತ್ತು ಶಿಸ್ತನ್ನು ನಾನು ಮುಂದೆಯೂ ಪಾಲಿಸುತ್ತೇನೆ ಎಂದು ವಾಗ್ದಾನ ಮಾಡುತ್ತೇನೆ” ಎಂದು ದಯಾ ನಾಯಕ್ ಅವರು ಭಾವನಾತ್ಮಕ ವಿದಾಯ ಸಂದೇಶವನ್ನು ತಮ್ಮ ಎಕ್ಸ್ ಅಕೌಂಟ್ನಲ್ಲಿ ದಾಖಲಿಸಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಸುಮಾರು 80ಕ್ಕೂ ಹೆಚ್ಚು ಎನ್ಕೌಂಟರ್ಗಳನ್ನು ಮಾಡಿರುವ ದಯಾ ನಾಯಕ್, ಕೆಲವು ಪ್ರಕರಣಗಳಲ್ಲಿ ವಿಚಾರಣೆಯನ್ನೂ ಎದುರಿಸಿದ್ದರು. ಹಿಂದೊಮ್ಮೆ ವರ್ಗಾವಣೆ ನಿರಾಕರಿಸಿದ್ದಕ್ಕೆ ಆರು ವರ್ಷಗಳ ಕಾಲ ದಯಾ ನಾಯಕ್ ಸಸ್ಪೆಂಡ್ ಕೂಡ ಆಗಿದ್ದರು.
ಅವರ ವೃತ್ತಿ ಮತ್ತು ವೈಯಕ್ತಿಕ ಜೀವನ ವರ್ಣರಂಜಿತವಾಗಿದೆ. ಅವರ ಜೀವನವನ್ನಾಧರಿಸಿ ಬಾಲಿವುಡ್ನಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲಿ ನಾನಾ ಪಾಟೇಕರ್ ಅಭಿನಯದ ಅಬ್ ತಕ್ ಛಪ್ಪನ್ ಚಿತ್ರ ಬಹಳ ಜನಪ್ರಿಯವಾಗಿತ್ತು. ಕನ್ನಡದಲ್ಲೂ ಅವರ ಪ್ರಭಾವ ಇರುವ ಪಾತ್ರಗಳನ್ನು ನಾವು ಅನೇಕ ಚಿತ್ರಗಳಲ್ಲಿ ನೋಡಬಹುದಾಗಿದೆ.
Leave feedback about this