ಬೆಂಗಳೂರು

ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಇಂದು ಮಹತ್ವದ ತೀರ್ಪು.!

ಬೆಂಗಳೂರು:- ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇವತ್ತು ಶಿಕ್ಷೆಯ ಪ್ರಮಾಣ ಹೊರಬೀಳಲಿದೆ.

ಶುಕ್ರವಾರ ನ್ಯಾಯಾಧೀಶರಾದ ಗಜಾನನ ಭಟ್ ತೀರ್ಪು ನೀಡುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಕೋರ್ಟ್‌ನಲ್ಲೆ ಕಣ್ಣೀರಿಟ್ಟಿದ್ದರು. ಇಂದು ರೇವಣ್ಣ ಪುತ್ರನಿಗೆ ಶಿಕ್ಷೆಯ ಪ್ರಮಾಣ ಪ್ರಕಟ ಆಗಲಿದೆ.

ಎಷ್ಟು ವರ್ಷ ಶಿಕ್ಷೆ ನೀಡಲಿದೆ ಎನ್ನುವ ವಿಚಾರ ತೀವ್ರ ಕುತೂಹಲ ಮೂಡಿಸಿದೆ. ಈ ಪ್ರಕರಣದಲ್ಲಿ ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇವತ್ತು ಮೊದಲಿಗೆ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ಪ್ರತಿವಾದವನ್ನ ಕೋರ್ಟ್ ಆಲಿಸಲಿದೆ. ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡಿಸುವ ಸಾಧ್ಯತೆ ಇದೆ. ಇನ್ನು ಕಡಿಮೆ ಶಿಕ್ಷೆ ನೀಡಿ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡುವ ಸಾಧ್ಯತೆಯೂ ಇದೆ.

ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟಿನ ಮೊರೆ ಹೋಗುವ ಅವಕಾಶಗಳು ಇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಶಿಕ್ಷೆಗೆ ತಡೆ ಅಥವಾ ರದ್ದು ಕೋರಿ ಹೈಕೋರ್ಟ್ಗೆ ಪ್ರಜ್ವಲ್ ಪರ ವಕೀಲರು ಅರ್ಜಿ ಸಲ್ಲಿಸಬಹುದು. ಹಾಗೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್ ಮೋರೆ ಹೋಗಬಹುದು ಎಂದು ಹೇಳಲಾಗುತ್ತಿದೆ.

ಪ್ರಕರಣದ ಹಿನ್ನೆಲೆ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನಿನ್ನೆ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದೆ. ಆದರೆ, ಪ್ರಕರಣದಲ್ಲಿ ಕೆಲವು ತಾಂತ್ರಿಕ ಸಾಕ್ಷ್ಯಗಳ ಕುರಿತಂತೆ ಸ್ಪಷ್ಟನೆ ಅಗತ್ಯವಿದ್ದು, ಅವುಗಳನ್ನು ನ್ಯಾಯಾಯಲಕ್ಕೆ ತಿಳಿಸುವಂತೆ ಕೋರ್ಟ್ ಎರಡೂ ಕಡೆಯ ವಕೀಲರಿಗೆ ಸೂಚನೆ ನೀಡಿದೆ.

ಮೈಸೂರಿನ ಕೆ.ಆರ್ ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 376(2) (2), 376(2)(8), 506, 354-2, 354(2), 354(2), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಗಳ ಪೆನ್‌ ಡ್ರೈವ್ ವೈರಲ್ ಆದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಬಳಿಕ ವಿಶ್ವಾದ್ಯಂತ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video