ಹಾಸನ:- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ ಪ್ರಕರಣದ ಮತ್ತೊಂದು ಕರಾಳ ಮುಖವಾದ ”ಪೆನ್ ಡ್ರೈವ್” ಹಂಚಿಕೆ ಮಾಡಿದವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ರಾಜಕೀಯ ದುರುದ್ದೇಶಕ್ಕಾಗಿ ಸಂತ್ರಸ್ತೆಯರ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್‌ಗಳನ್ನು ಹಂಚಿ ಅವರ ಘನತೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಿದವರಿಗೂ ಶಿಕ್ಷೆ ಆಗಬೇಕು ಎಂದು ಮಹಿಳಾ ಹೋರಾಟಗಾರರು ಮತ್ತು ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಹೋರಾಟಗಾರ್ತಿ ರೂಪಾ ಹಾಸನ್, ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತ್ವರಿತವಾಗಿ ತೀರ್ಪು ನೀಡಿರುವುದು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಈ ತೀರ್ಪಿನಿಂದ ಧೈರ್ಯಗೊಂಡು, ಪ್ರಕರಣದ ಉಳಿದ ಸಂತ್ರಸ್ತೆಯರು ಈಗಲಾದರೂ ಮುಂದೆ ಬಂದು ದೂರು ನೀಡಬೇಕು ಎಂದು ಅವರು ಮನವಿ ಮಾಡಿದರು.
ರೂಪಾ ಹಾಸನ್ ಅವರ ಪ್ರಕಾರ, ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಅಪರಾಧದಷ್ಟೇ, ಆ ಪೆನ್ ಡ್ರೈವ್‌ಗಳನ್ನು ಹಂಚಿದ್ದು ಕೂಡ ಘನ ಘೋರ ಅಪರಾಧವಾಗಿದೆ. “ಕೇವಲ ರಾಜಕೀಯ ಲಾಭಕ್ಕಾಗಿ ಹಾಸನದ ಬೀದಿ ಬೀದಿಗಳಲ್ಲಿ ಪೆನ್ ಡ್ರೈವ್‌ಗಳನ್ನು ಹಂಚಲಾಯಿತು. ಇದರಿಂದ ಅಸಂಖ್ಯಾತ ಮಹಿಳೆಯರ ಘನತೆಗೆ ಧಕ್ಕೆಯಾಗಿ ಅವರ ಮಾನ ಹರಾಜಾಯಿತು. ಈ ಕೃತ್ಯ ಎಸಗಿದವರು ಯಾರೆಂದು ಪತ್ತೆಹಚ್ಚಿ, ಅವರಿಗೂ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ, ಪೆನ್ ಡ್ರೈವ್ ಹಂಚಿಕೆ ಪ್ರಕರಣದ ತನಿಖೆಯು ಆರೋಪಪಟ್ಟಿ ಸಲ್ಲಿಸುವ ಹಂತಕ್ಕೆ ಬಂದಿದೆ. ತನಿಖಾ ಸಂಸ್ಥೆಗಳು ಶೀಘ್ರವಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿ, ಈ ಅಪರಾಧದ ಹಿಂದಿರುವ ಎಲ್ಲರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
Leave feedback about this