ಬೆಂಗಳೂರು

ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ.- ಆರ್.ಅಶೋಕ್

ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಇಂದು ಸಾರಿಗೆ ಬಸ್‌ಗಳು ರಸ್ತೆಗೆ ಇಳಿದಿಲ್ಲ, ಬಸ್‌ ಸಂಚಾರದಲ್ಲಿನ ವ್ಯತ್ಯಾಸದಿಂದಾಗಿ ಇದರ ಪರಿಣಾಮ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೇಲು ಬೀರಿದೆ. ದಿವಾಳಿ ಸರ್ಕಾರ ವಿರುದ್ಧ ಸಾರಿಗೆ ನೌಕರರ ಮುಷ್ಕರ, ರಾಜ್ಯಾದ್ಯಂತ ಸ್ತಬ್ಧವಾದ ಬಸ್ ಸಂಚಾರ ಎಂದು ವಿರೋಧ ಪಕ್ಷದ ನಾಯಕರಾದ ಆರ್‌ ಅಶೋಕ್‌ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಆರ್‌ ಅಶೋಕ್‌ ಅವರು, ಸಿದ್ಧರಾಮಯ್ಯನವರೇ, ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರಿಗೆ ನೆಮ್ಮದಿಯ ಜೀವನ ಮಾಡಲು ಬಿಡಿ ಎಂದಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಲ್ಲ, ನೌಕರರು, ಉದ್ಯೋಗಿಗಳು ಕೆಲಸಕ್ಕೆ ಹೋಗಲು ಬಸ್ಸಿಲ್ಲ, ನೆಂಟರಿಷ್ಟರ ಮನೆಗಳಿಗೆ, ಶುಭ ಸಮಾರಂಭಗಳಿಗೆ, ಸಾವು-ನೋವಿಗೆ ಹೋಗಲು ಬಸ್ಸಿಲ್ಲ, ಇದು ಬಹುಪಾಲು ಕನ್ನಡಿಗರ ಇವತ್ತಿನ ಬವಣೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಖಜಾನೆ ಖಾಲಿ ಮಾಡಿ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ಜನಸಾಮಾನ್ಯರಿಗೆ ಪರದಾಟ, ಗೋಳಾಟ, ತೊಳಲಾಟ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟರಲ್ಲ ಸ್ವಾಮಿ. ಸಾರಿಗೆ ನೌಕರರ ಹಿಂಬಾಕಿ ಕೊಡಲು ದುಡ್ಡಿಲ್ಲ, ನೌಕರರ ವೇತನ ಹೆಚ್ಚಳ ಮಾಡಲು ದುಡ್ಡಿಲ್ಲ, ಹೊಸ ಬಸ್ ಖರೀದಿಗೆ ದುಡ್ಡಿಲ್ಲ, ಹಳೆ ಬಸ್ಸುಗಳ ರಿಪೇರಿಗೆ ದುಡ್ಡಿಲ್ಲ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ನಿಮ್ಮ ಅಧಿಕಾರದ ಲಾಲಸೆಗೆ, ದುರಾಡಳಿತಕ್ಕೆ ಜನಸಾಮಾನ್ಯರು ಇನ್ಯಾವ್ಯಾವ ರೀತಿ ಪರದಾಡಬೇಕು, ಇನ್ನೆಷ್ಟು ಕಷ್ಟ ಅನುಭವಿಸಬೇಕು ಎಂದು ಆರ್‌ ಅಶೋಕ್‌ ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ ಆರ್ ಅಶೊಕ್, ನಾನು ಸಾರಿಗೆ ಸಚಿವನಾಗಿದ್ದಾಗ ಅವರ ಬೇಡಿಕೆ ಈಡೇರಿಸಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ 4 ವರ್ಷದ ಹಿಂಬಾಕಿ ಕೊಡದೆ, ಸಾರಿಗೆ ಸಿಬ್ಬಂದಿಗೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತಕ್ಷಣ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದ್ದಾರೆ. ‘ಸರ್ಕಾರದ ಖಜಾನೆ ಖಾಲಿಯಾಗಿದೆ, ಜನರನ್ನು ಕೊಳ್ಳೆಹೊಡೆಯಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video