ಚಿಕ್ಕಮಗಳೂರು

ನಾನು ನನ್ನ ಶಕ್ತಿ ಮೀರಿ ನರಸಿಂಹರಾಜಪುರಕ್ಕೆ ಕೆಲಸ ಮಾಡಿದ್ದೇನೆ.- ಎಂ.ಶ್ರೀನಿವಾಸ್

ಚಿಕ್ಕಮಗಳೂರು:- ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನರಸಿಂಹರಾಜಪುರದ ಪ್ರಮುಖ ಅಭಿವೃದ್ಧಿಗಳಿಗಾಗಿ ಪಟ್ಟಣದ ರಸ್ತೆಯ ಅಗಲೀಕರಣಕ್ಕಾಗಿ 60 ಕೋಟಿ ರೂಪಾಯಿ, ಹೊನ್ನೆಕೊಡಿಗೆ ನರಸಿಂಹರಾಜಪುರ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ 35 ಕೋಟಿ ರೂ. ಹಾಗೂ ಸೇತುವೆಯಿಂದ ಪ್ರವಾಸಿ ಮಂದಿರದವರೆಗಿನ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿದ್ದಾರೆ. ಅದು ನನ್ನ ಹುಟ್ಟೂರು ಎನ್ನುವ ಅಭಿಮಾನಕ್ಕಾಗಿ ಅಲ್ಲದೇ ನನ್ನ ಮೇಲಿನ ಪ್ರೀತಿ-ವಿಶ್ವಾಸ ಅಭಿಮಾನದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಷ್ಟೊಂದು ಅನುದಾನವನ್ನು ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಎಂ.ಶ್ರೀನಿವಾಸ ಅವರು ಹೇಳಿದ್ದಾರೆ.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿಗೆ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 100 ಕೋಟಿ ಅನುದಾನವನ್ನು ನೀಡಿದ್ದಾರೆ, ಅವರನ್ನು ತಾಲೂಕಿನ ಜನತೆಯ ಪರವಾಗಿ ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ಹೇಳಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಕಡಹಿನಬೈಲು ಏತ ನೀರಾವರಿ ಯೋಜನೆ ಉದ್ಘಾಟನೆಗೆ ಬಂದಿದ್ದು, ಎರಡನೇ ಬಾರಿ ನರಸಿಂಹರಾಜಪುರ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯ ಶಂಕುಸ್ಥಾಪನೆಗೆ ಹಾಗೂ ನರಸಿಂಹರಾಜಪುರ ಪಟ್ಟಣದಲ್ಲಿ ನವೀಕರಣಗೊಂಡ ಪ್ರವಾಸಿ ಮಂದಿರದ ಉದ್ಘಾಟನೆಗೆ ಬಂದಿದ್ದರು. ಈಗ ಪುನಃ ಮೂರನೇ ಬಾರಿ ಹೊನ್ನೆಕೊಡಿಗೆ ಸೇತುವೆ ಉದ್ಘಾಟನೆಗೆ ಹಾಗೂ 60 ಕೋಟಿ ರೂ.ಗಳ ರಸ್ತೆ ಅಗಲೀಕರಣದ ಕಾಮಗಾರಿಯ ಉದ್ಘಾಟನೆಗೆ ಬರಲಿದ್ದಾರೆ ಎಂದರು.

ಇದು ನನ್ನ ಜೀವಮಾನದ ಸಾಧನೆಯಾಗಿದೆ ಎಂದರಲ್ಲದೆ ಇದರಿಂದ ನರಸಿಂಹರಾಜಪುರದ ಚಿತ್ರಣವೇ ಬದಲಾಗಲಿದೆ, ಅವರ ಕೊಡುಗೆಗಳನ್ನು ಸದಾ ನೆನಪಿಸುವ ದೃಷ್ಟಿಯಿಂದ ಎನ್.ಆರ್.ಪುರದ ಮುಖ್ಯ ರಸ್ತೆಗೆ ಸಿದ್ದರಾಮಯ್ಯನವರ ಹೆಸರನ್ನ ಇಡಲಾಗುವುದು. ನಾನು ನನ್ನ ಶಕ್ತಿ ಮೀರಿ ನರಸಿಂಹರಾಜಪುರಕ್ಕೆ ಕೆಲಸ ಮಾಡಿದ್ದೇನೆ. ನಾನು ಯಾವುದೇ ಸ್ವಾರ್ಥದಿಂದ ಕೆಲಸ ಮಾಡಿಲ್ಲ, ನನಗೆ ನನ್ನ ಹುಟ್ಟೂರು ಅಭಿವೃದ್ಧಿ ಹೊಂದಬೇಕು, ಹುಟ್ಟೂರಿನ ಚಿತ್ರಣವೇ ಬದಲಾಗಬೇಕು. ಹಿಂದಿನ ಗತಕಾಲದ ವೈಭವ ಮರುಕಳಿಸಬೇಕು. ಅಲ್ಲದೆ 110 ವರ್ಷಗಳ ಹಿಂದೆ ಎಡೆಹಳ್ಳಿಯಾಗಿದ್ದ ನರಸಿಂಹರಾಜಪುರವಾಗಿತ್ತು. ಆದರೆ, ಇಲ್ಲಿ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ ಸಾಕಷ್ಟು ಘಟಾನುಘಟಿ ರಾಜಕಾರಣಿಗಳು, ಶಾಸಕರು, ಸಂಸದರು ಆಳ್ವಿಕೆ ಮಾಡಿ ಹೋದರಾದರೂ ಯಾರಿಗೂ ನರಸಿಂಹರಾಜಪುರದ ಅಭಿವೃದ್ಧಿಯನ್ನು ಮಾಡುವ ಇಚ್ಛಾಶಕ್ತಿ ಇರಲಿಲ್ಲ. ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕೂಡ ಆಗಲಿಲ್ಲ ಎಂದರು.

ಈ ರಾಜ್ಯಕ್ಕೆ ಜನಪರ, ಹಿಂದುಳಿದಪರ, ದಲಿತ ಪರವಾದ, ಸಮಾಜವಾದಿ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಅಭಿವೃದ್ಧಿ ಚಿತ್ರಣವೇ ಬದಲಾಗುತ್ತ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಬಡವರ ಕುಟುಂಬಗಳು ಇಂದು ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸಂತೋಷದ ಹಾಗೂ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರದ ಗೃಹಲಕ್ಷ್ಮಿ, ವಿದ್ಯಾನಿಧಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ನಾರಿ ಶಕ್ತಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ರಾಜಕೀಯಕ್ಕಾಗಿ ವಿರೋಧ ಮಾಡುವುದನ್ನು ಬಿಟ್ಟು ಜನಪರ ಕಾರ್ಯಗಳನ್ನು ವಿರೋಧ ಪಕ್ಷಗಳು ಬೆಂಬಲಿಸಬೇಕು. ಪ್ರವಾಸೋದ್ಯಮ ನಿಗಮದ ವತಿಯಿಂದ ನರಸಿಂಹರಾಜಪುರದಲ್ಲಿ ಪಾರ್ಕ್ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಜಿಲ್ಲೆಯ ಮುಳ್ಳಯ್ಯನಗಿರಿ ಅಭಿವೃದ್ಧಿ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಮೂರು ಸ್ಟಾರ್ ಹೋಟೆಲ್ ಗಳನ್ನು ಮಾಡಲು ಉದ್ದೇಶಿಸಲಾಗಿದೆ ಎಂದರು.

ಈ ಹಿಂದೆ ಕಡಹೀನಬೈಲು ಏತ ನೀರಾವರಿ ಯೋಜನೆಗೆ 5 ಕೋಟಿಯಿಂದ ಹದಿನಾರು ಕೋಟಿ ಅನುದಾನ ನೀಡಿ ಈ ಭಾಗದ ರೈತರ ಬದುಕು ಹಸನಾಗಲು ಪ್ರಯತ್ನಿಸಿದ್ದಾರೆ. ಅಲ್ಲದೆ ಈ ಬಾರಿಯ ಬಜೆಟ್ ನಲ್ಲಿ ಏತ ನೀರಾವರಿ ಯೋಜನೆಗೆ ಯೋಜನೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗಾಗಿ ಹಾಗೂ ಹೊಸ ಪೈಪ್ ಲೈನ್ ವಿಸ್ತರಣೆಗಾಗಿ 15 ಕೋಟಿ ರೂ ಅನುದಾನವನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದಾರೆ ಎಂದರು.

ಈಗಾಗಲೇ ಹೊನ್ನೆಕೊಡಿಗೆ ನರಸಿಂಹರಾಜಪುರ ಸಂಪರ್ಕ ಸೇತುವೆಗೆ ಜನರೇ “ಸಿದ್ದರಾಮಯ್ಯ ಸೇತುವೆ” ಎಂದು ನಾಮಕರಣ ಮಾಡಿದ್ದಾರೆ ಇದು ಸಿದ್ದರಾಮಯ್ಯನವರ ಮೇಲೆ ಇರುವ ಜನರ ಅಭಿಮಾನವನ್ನು ಎತ್ತಿ ತೋರಿಸುತ್ತದೆ ಎಂದರು. ರಸ್ತೆಯ ಅಗಲೀಕರಣಕ್ಕೆ ಪಟ್ಟಣದ ಎಲ್ಲ ಜನರ ಸಹಕಾರ ಕೋರಿ ವಿಶ್ವಾಸ ಪೂರ್ವಕವಾಗಿ ನಿವೇಶನ ಜಾಗಗಳನ್ನು ಸ್ವಾಧೀನ ಪಡೆದುಕೊಂಡು ಅವರಿಗೆ ಉತ್ತಮವಾದಂತಹ ಸರ್ಕಾರ ನಿಗದಿ ಮಾಡುವ ಪರಿಹಾರವನ್ನು ನೀಡಲಾಗುವುದು ನಂತರ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಾಡಲಾಗುವುದು ಎಲ್ಲೂ ಯಾರಿಂದಲೂ ಅಪಸ್ವರ ಬಾರದ ಹಾಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜನರು ಕೂಡ ಇದು ನಮ್ಮ ಮನೆ ಕೆಲಸ ಎಂದು ಅರಿತು ನಮ್ಮೊಡನೆ ಕೈಜೋಡಿಸಬೇಕು ಹಾಗೆ ಪಟ್ಟಣದ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದರು. ಆಕರ್ಷಕವಾದಂತಹ, ಸೌಂದರ್ಯ ಯುತವಾದಂತಹ, ಅಂದ ಚೆಂದದ ಪಟ್ಟಣವನ್ನ ನಿರ್ಮಾಣ ಮಾಡಲು ಪಟ್ಟಣದ ಪ್ರತಿಯೊಬ್ಬ ನಾಗರಿಕರು ಕೂಡ ಪಟ್ಟಣ ಪಂಚಾಯಿತಿಯೊಂದಿಗೆ, ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಬೇಕು ಎಂದರು.

ಎಂ ಶ್ರೀನಿವಾಸರವರು ನರಸಿಂಹರಾಜಪುರದಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದು, ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ನರಸಿಂಹರಾಜಪುರದ ಮುಖಂಡರ ಜೊತೆ ಚರ್ಚೆ ಮಾಡಲಿದ್ದಾರೆ ಹಾಗೆ ಶುಕ್ರವಾರದಂದು ನರಸಿಂಹರಾಜಪುರದ ಜಾಮಿಯ ಮಸೀದಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹೊನ್ನೇಕೊಡಿಗೆ ಸೇತುವೆಯ ಕಾಮಗಾರಿಯ ವೀಕ್ಷಣೆಯನ್ನು ಮಾಡಲಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video