ಬೆಂಗಳೂರು:- ದಿವಂಗತ ಹಿರಿಯ ನಟ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋ ರಾತ್ರಿ ಕೆಡವಿದ್ದಕ್ಕೆ ಇದೀಗ ನಟ-ನಟಿಯರು ಸೇರಿದಂತೆ ರಾಜ್ಯಾದ್ಯಂತ ʼ’ದಾದಾʼ’ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ವಿಷ್ಣು ಸ್ಮಾರಕ ನೆಲಸಮ ಮಾಡಿದ್ದರ ಕುರಿತು ಹಿರಿಯ ನಟಿ ಶೃತಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಟಿ, ಜಮೀನಿನ ವಿವಾದ ಇರುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಗೊತ್ತಿದ್ದರೆ ವಿಷ್ಣುವರ್ಧನ್ ಅವರ ಸಮಾಧಿಗೆ ನನ್ನ ಜಮೀನನ್ನೇ ಬಿಟ್ಟುಕೊಡುತ್ತಿದ್ದೆ ಎಂದಿದ್ದಾರೆ. ವಿಷ್ಣುವರ್ಧನ್ ಅವರು ನಮ್ಮೆಲ್ಲರ ಆರಾಧ್ಯ ದೈವ, ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ. ನನ್ನ ಬಳಿಯೂ ಚಿಕ್ಕದೊಂದು ಜಮೀನು ಇದೆ. ಅಲ್ಲಿಯೇ ಜಾಗ ಕೊಡುತ್ತಿದ್ದೆ ಎಂದು ಶೃತಿ ತಿಳಿಸಿದ್ದಾರೆ.
ಇನ್ನು ನಟ ವಿಜಯ್ ರಾಘವೇಂದ್ರ ಪ್ರತಿಕ್ರಿಯಿಸಿ, ತುಂಬಾ ಪ್ರಾಮಾಣಿಕವಾಗಿ ಹೇಳುವುದಾದರೆ, ಇದನ್ನು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎನ್ನುವುದು ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಈ ಬಗ್ಗೆ ದೂರವಾಣಿ ಕರೆ ಬಂದಿದೆ ಅಷ್ಟೇ. ಇದನ್ನು ಕೇಳಿದ ತಕ್ಷಣ ಭಾವನೆಗಳಿಗೆ ಹರ್ಟ್ ಆಗುವುದು ನಿಜ. ಇವುಗಳ ನಡುವೆಯೂ ಕೆಲವು ಕಿಡಿಗೇಡಿಗಳು ಇಂಥ ಕೆಲಸ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ನಟ ಕಿಚ್ಚ ಸುದೀಪ್ ಅವರು ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಜಮೀನು ವಿವಾದ ಸಂಬಂಧ ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗುತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ವಿಷ್ಣು ಸ್ಮಾರಕ ನೆಲಸಮ: 2009ರ ಡಿಸೆಂಬರ್ 30 ರಂದು ಸ್ಯಾಂಡಲ್‌ವುಡ್‌ನ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ ನಿಧನರಾದರು. ಬಳಿಕ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಸಮಾಧಿ ಮಾಡಲಾಗಿದೆ. ಆದರೆ ಈ ಸಮಾಧಿಯನ್ನು ಗುರುವಾರ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಜಾಗದ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಈ ವಿವಾದಿತ ಜಾಗದಲ್ಲಿ ವಿಷ್ಣುವರ್ಧನ್ ಅವರ 8 ಅಡಿ ಸ್ಮಾರಕ ಕೂಡ ಸ್ಥಾಪನೆ ಆಗಿತ್ತು. ವಿಷ್ಣುವರ್ಧನ್ ರವರ 600 ಫೋಟೋಗಳ ಗ್ಯಾಲರಿ ಕೂಡ ಇದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ನಿರ್ಮಾಣ ಆಗಿತ್ತು, ಆಡಿಟೋರಿಯಂ ಕೂಡ ಕಟ್ಟಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪುಣ್ಯಸ್ಮರಣೆಗೂ ಅವಕಾಶ ಕೊಟ್ಟಿರಲಿಲ್ಲ. ಇದೀಗ ಈ ಸ್ಮಾರಕವನ್ನು ನೆಲಸಮ ಮಾಡಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಕಟ್ಟೆಚ್ಚರ ಕೂಡ ಮಾಡಲಾಗಿದೆ.
Leave feedback about this