ಶಿವಮೊಗ್ಗ:- ಧರ್ಮಸ್ಥಳದ ಸುತ್ತಮುತ್ತಲು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಶವ ಹೂತಿಟ್ಟಿದ್ದೇನೆ ಎಂದು ಮುಸುಕುಧಾರಿ ಬಂದ ಬಳಿ ಭಾರೀ ವಿವಾದ ಸೃಷ್ಟಿಯಾಗಿದೆ. ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಮಾತೇ ಆಡುತ್ತಿಲ್ಲ, ಇದೀಗ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗಡೆಯವರು ಸರ್ಕಾರ ಮಾಡುವ ಕೆಲಸವನ್ನು ಕೂಡ ಅವರೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಿವಗಂಗಾ ಬಸವರಾಜ್ ಹಾಡಿ ಹೊಗಳಿದ್ದಾರೆ.
ಜಿಲ್ಲೆಯ ಚನ್ನಗಿರಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಮೇಲೆ ಬಂದ ಈ ಅರೋಪವನ್ನು ನಂಬಲು ಅಸಾಧ್ಯವಾಗಿದೆ. ಏಕೆ ಅರೋಪ ಮಾಡ್ತಾರೆ ಅಂತ ಗೊತ್ತಿಲ್ಲ, ಎಸ್ಐಟಿ ತನಿಖೆ ನಡೆಯುತ್ತಿದೆ. ಇದುವರೆಗೂ ಯಾವುದೇ ಆಧಾರಗಳು ಸಿಕ್ಕಿಲ್ಲ ಎಂದಿದ್ದಾರೆ.
ಹೆಗ್ಗಡೆಯವರು ಒಂದು ಸರ್ಕಾರ ಮಾಡುವ ಕೆಲಸವನ್ನು ಸ್ವಹಿತಾಸಕ್ತಿಯಿಂದ ಮಾಡುತ್ತಿದ್ದಾರೆ. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ನೆರವಾಗುವ ಕಾರ್ಯಕ್ರಮಗಳು. ಆದರೆ, ಇಂದಿನ ವ್ಯವಸ್ಥೆಯಲ್ಲಿ ಇದು ದುಃಖಕರ ವಿಷಯ. ಯಾರ್ಯಾರು ಆರೋಪ ಮಾಡಿದರೋ ಆ ಬಗ್ಗೆ ಎಸ್‌ಐಟಿ ತನಿಖೆ ನಡೀತಿದೆ. ಆದರೆ, ಆರೋಪ ಮಾಡುವವರಿಗೆ ಇಂತಹ ಮನಸ್ಥಿತಿ ಏಕೆ ಬಂತು ಗೊತ್ತಿಲ್ಲ. ಮುಸುಕುಧಾರಿ ಬಂದು ಹೇಳಿದರೂ ಧರ್ಮಸ್ಥಳದಲ್ಲಿ ಶವಗಳು ಸಿಕ್ಕಿಲ್ಲ. ಇದರ ಹಿಂದೆ ಕಾಣದ ಕೈಗಳ ಪಿತೂರಿ ನಡೆಯುತ್ತಿದೆ. ಧರ್ಮಸ್ಥಳ ನಮ್ಮ ರಾಜ್ಯದ ಜನತೆಯ ಧಾರ್ಮಿಕ ಭಕ್ತ ಕೇಂದ್ರವಾಗಿದೆ. ಅದ್ದರಿಂದ ಅದರ ಮೇಲೆ ಪಿತೂರಿ ನಡೆಸುತ್ತಿದ್ದವರು ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೆಣ್ಣುಮಕ್ಕಳು ಸ್ವಾವಲಂಬನೆಯಿಂದ ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯ ಇಟ್ಟುಕೊಂಡು ವೀರೇಂದ್ರ ಹೆಗ್ಗಡೆ ಕೆಲಸ ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಮನೆಯೊಳಗೆ ಈ ರೀತಿ ನಡೆಯುತ್ತೆ ಅಂದರೆ ನಮಗೂ ನಂಬಕೋಗಾಲ್ಲ. ಆದರೂ ಸಹ ಎಸ್‌ಐಟಿ ತನಿಖೆ ನಡೆಯುತ್ತಿದೆ. ಆರೋಪ ಮಾಡಿದವರು ತೋರಿಸಿದ ಜಾಗದಲ್ಲಿ ಏನು ಸಿಕ್ಕಿಲ್ಲ. ಯಾವುದೇ ಶವ ಆಗಲಿ, ಅವಶೇಷವಾಗಲಿ ಸಿಕ್ಕಿಲ್ಲ. ಇದರ ಹಿಂದೆ ಏನೋ ಪಿತೂರಿ ಇದೆ ಅಂತಾ ಗೊತ್ತಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ದಯಮಾಡಿ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಬೇಕು. ಧರ್ಮಸ್ಥಳ ರಾಜ್ಯದ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಪಿತೂರಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿವಗಂಗಾ ಬಸವರಾಜ ಒತ್ತಾಯಿಸಿದ್ದಾರೆ.
Leave feedback about this