ಮಂಗಳೂರು:- ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದಲ್ಲಿ ಇಲ್ಲಿಯವರೆಗೂ ಅನಾಮಿಕ ಮಾಸ್ಕ್‌ಮ್ಯಾನ್ ಹೇಳಿದ ರೀತಿ ದೊಡ್ಡ ಸಾಕ್ಷಿಯೇನು ಸಿಕ್ಕಿಲ್ಲ. ಈ ನಡುವೆ ಉದ್ಭವ ಆಗಿದ್ದ ಸಾಕ್ಷಿದಾರರು ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದು, ಎಸ್‌ಐಟಿ ಜೊತೆ ಇರುವ ಮಾಸ್ಕ್‌ಮ್ಯಾನ್ ಬೇರೆ, ನಾವು ಶವ ಹೂಳುವಾಗ ನೋಡಿದ್ದ ವ್ಯಕ್ತಿಯೇ ಬೇರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಮಾಸ್ಕ್‌ಮ್ಯಾನ್ ಬೇರೆ, ಶವ ಹೂತು ಹಾಕಿದ್ದ ವ್ಯಕ್ತಿಯೇ ಬೇರೆ
ಇಂದು ಎಸ್‌ಐಟಿ ತನಿಖೆ ಮಾಡುತ್ತಿರುವ 13ನೇ ಪಾಯಿಂಟ್ ಬಳಿ ಭರ್ಜರಿ ಮಳೆ ಆಗುತ್ತಿದ್ದರೂ ಸಹ ಅಧಿಕಾರಿಗಳು ಶೋಧಕಾರ್ಯ ಮಾಡುತ್ತಿದ್ದಾರೆ. ಈ ಸ್ಥಳಕ್ಕೆ ಇಂದು ಶವ ಹೂತು ಹಾಕಿದ್ದನ್ನ ನೋಡಿದ್ದೇವೆ ಎಂದು ಹೇಳಿದ್ದ ಹೊಸ ಸಾಕ್ಷಿದಾರರಾದ ಪಾಂಡುರಂಗ ಮತ್ತು ತುಕಾರಾಮ ಗೌಡ ಭೇಟಿ ಕೊಟ್ಟಿದ್ದರು. ಈ ಸಮಯದಲ್ಲಿ ಮಾತಾಡಿದ ತುಕಾರಾಂ ಗೌಡ, 2009ರಲ್ಲಿ ಶವವನ್ನ ಹೂತು ಹಾಕಿರುವುದನ್ನ ನಾವು ನೋಡಿದ್ದೇವೆ. ಎಸ್‌ಐಟಿ ಈ ವಿಚಾರವಾಗಿ ತನಿಖೆ ಆರಂಭ ಮಾಡಿ ಸಹಾಯವಾಣಿ ಶುರು ಮಾಡಿದಾಗ ನಾವು ಕಚೇರಿಗೆ ಹೋಗಿ ದೂರು ಕೊಟ್ಟಿದ್ದೆವು. ಆದರೆ, ನಾವು ನೋಡಿದ ವ್ಯಕ್ತಿಯೇ ಬೇರೆ, ಶವ ಹೂತು ಹಾಕಿದ್ದ ವ್ಯಕ್ತಿಯೇ ಬೇರೆ. ಈ ಅನಾಮಿಕ ಮಾಸ್ಕ್‌ಮ್ಯಾನ್ ಶವವನ್ನ ಹೂತು ಹಾಕಿಲ್ಲ. ಇವನು ಬೇರೆ ಯಾರೂ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಜಾಗ ತೋರಿಸಲು ನಾವು ಸಿದ್ದ: ಇದಿಷ್ಟೇ ಅಲ್ಲದೇ, ನಾವು ಎರಡು, ಮೂರು ಶವಗಳನ್ನ ಹೂತು ಹಾಕಿರುವುದನ್ನ ನೋಡಿದ್ದೇವೆ. ಆದರೆ, ಅವರ ಪರಿಚಯ ನಮಗೆ ಇಲ್ಲ. ನಾವು ಈಗ ಗುರುತು ಮಾಡಿರುವ ಸ್ಥಳದಲ್ಲಿ ಶವ ಹೂತು ಹಾಕಿರುವುದ್ನ ನೋಡಿಲ್ಲ. ಅದೇ ಬೇರೆ ಜಾಗ. ಎಸ್ ಐ ಟಿ ಅಧಿಕಾರಿಗಳು ಕೇಳಿದರೆ ನಾವು ಶವ ಹೂತು ಹಾಕಿರುವ ಸ್ಥಳವನ್ನ ತೋರಿಸಬೇಕು ಎಂದು ಕೇಳಿದರೆ ನಾವು ತೋರಿಸಲು ಸಿದ್ದರಿದ್ದೇವೆ. ನಾನು ಆ ಜಾಗದಲ್ಲಿ ಒಂದು ಬಾರಿ ಮಾತ್ರ ಹೆಣವನ್ನ ಹೂಳುವುದನ್ನ ನೋಡಿದ್ದೇನೆ. ಆದರೆ ಎಷ್ಟು ಶವ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತುಕರಾಂ ಹೇಳಿದ್ದಾರೆ.
ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗದ ಹಿನ್ನಲೆ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅನಾಮಿಕ ವ್ಯಕ್ತಿ ಇಲ್ಲೇ ಮೃತದೇಹವನ್ನು ಹೂತಿದ್ದೇನೆ ಎಂದು ಮೊದಲು 13 ಸ್ಥಳಗಳನ್ನು ಗುರುತಿಸಿದ್ದ, ಬಳಿಕ ಉತ್ಖನನ ಆರಂಭಿಸಿದ ಎಸ್ ಐಟಿ ಅಧಿಕಾರಿಗಳಿಗೆ ಯಾವುದೇ ಕಳೇಬರಹ ಪತ್ತೆಯಾಗಿರಲ್ಲಿಲ್ಲ. ಜೊತೆಗೆ ಸಿಕ್ಕ ಅವಶೇಷಗಳು ಕೂಡ ಪುರುಷರದ್ದು, ಹಾಗಾಗಿ ಅಧಿಕಾರಿಗಳು ಈ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಏನು ಪತ್ತೆಯಾಗದ ಹಿನ್ನಲೆ ಮುಂದಿನ ಕ್ರಮ ಏನು ಎಂಬ ಪ್ರಶ್ನೆ ಅಧಿಕಾರಿಗಳಿಗೆ ಕಾಡುತ್ತಿದ್ದು, ಈ ಹಿನ್ನಲೆ ಮಂಪರು ಪರೀಕ್ಷೆಗಾಗಿ ಎಸ್‌ಐಟಿ ಅಧಿಕಾರಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಲು ಪ್ಲಾನ್ ಮಾಡಿದ್ದಾರೆ.
Leave feedback about this