ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲ್‌ಗೆ ಕಳುಹಿಸಲಾಗಿದೆ. ಕಳೆದ ಬಾರಿಯಂತೆ ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್‌ಗೆ ಈ ಬಾರಿ ರಾಜಾತಿಥ್ಯ ಸಿಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆನೂ ಜೈಲಾಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದೆ. ಆದರೆ, ದರ್ಶನ್‌ಗೆ ಈ ಬಾರಿ ಅವರ ಇಬ್ಬರು ಸ್ನೇಹಿತರು ಸಾಥ್ ಕೊಡಲಿದ್ದರೆ.
ಈಗಾಗಲೇ ದರ್ಶನ್‌ಗೆ ತೀರಾ ಆತ್ಮೀಯರಾಗಿರುವ ಇಬ್ಬರು ಗೆಳೆಯರು ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ವಿನಯ್ ಕುಲಕರ್ಣಿ ಹಾಗೂ ದರ್ಶನ್ ಇಬ್ಬರೂ ಆತ್ಮೀಯರು. ಅವರ ಫಾರ್ಮ್‌ಹೌಸ್‌ಗೆ ದರ್ಶನ್ ಹಲವು ಬಾರಿ ಭೇಟಿ ಕೊಟ್ಟಿದ್ದರು.
ಇನ್ನು ಪ್ರಜ್ವಲ್ ರೇವಣ್ಣ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಜ್ವಲ್ ರೇವಣ್ಣ ಜೊತೆನೂ ದರ್ಶನ್ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹೇಳಲಾಗಿದೆ. ಇಬ್ಬರು ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗಾಗಲೇ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಈಗ ಅವರೊಂದಿಗೆ ಮೂರನೇ ಪ್ರಭಾವಿ ವ್ಯಕ್ತಿಯಾಗಿ ದರ್ಶನ್ ಸೇರಿಕೊಳ್ಳಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ಜೈಲು ಸೇರುತ್ತಿರುವ ದರ್ಶನ್ ಆಪ್ತರು ಇದ್ದರೂ ಅವರ ಭೇಟಿಗೆ ಅವಕಾಶ ಸಿಗೋದು ಅನುಮಾನ. ಕಳೆದ ಬಾರಿ ಮಾಡಿಕೊಂಡ ಎಡವಟ್ಟು ಇಷ್ಟಕ್ಕೆಲ್ಲ ಕಾರಣ. ಹೀಗಾಗಿ ಈ ಬಾರಿ ದರ್ಶನ್ ಮೇಲೆ ಜೈಲಾಧಿಕಾರಿಗಳು ಹದ್ದಿನ ಕಣ್ಣು ಇಡಬೇಕಾಗಿದೆ. ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದ್ದರಿಂದ ಈ ಬಾರಿ ದರ್ಶನ್‌ರನ್ನು ಐಷಾರಾಮಿಯಾಗಿ ಇರುವುದಕ್ಕೆ ಬಿಡುವುದು ಅನುಮಾನ.
Leave feedback about this