ಮಂಗಳೂರು:- ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಕಾರ್ಯಾಚರಣೆಯ ಆರಂಭದ ಹತ್ತು ದಿನಗಳಲ್ಲಿ ಯಾರೂ ಬಾಯಿ ಬಿಚ್ಚಿಲ್ಲ. ಎಸ್ ಐಟಿ ರಚಿಸಲಿ ಎಂದು ಅವರೂ ಹೇಳಿಕೆ ನೀಡಿದರು. ಈಗ ಎಲ್ಲ ಸಂಗತಿಗಳೂ ಹೊರ ಬಂದ ಮೇಲೆ ರಾಜಕೀಯ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ಬಿಜೆಪಿಯವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಧಾರ್ಮಿಕ ವಿಚಾರ ಉಪಯೋಗಿಸಿಕೊಂಡು ರಾಜಕೀಯ ಲಾಭ ಪಡೆಯುವುದು ಬಿಜೆಪಿ ಹಳೆಯ ತಂತ್ರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಗೃಹ ಸಚಿವ ಜಿ.ಪರಮೇಶ್ವರ ಅವರು ಸದನದಲ್ಲಿ ಉತ್ತರಿಸಲಿದ್ದಾರೆ. ಈ ಕುರಿತಂತೆ ಸಿಎಂ ಕೂಡ ಹೇಳಿಕೆ ನೀಡಬಹುದು ಎಂದರು. ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಮೃತ ದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿರುವ ಪ್ರಕರಣವು ಇಡೀ ದೇಶ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಗಳು ಗಂಭೀರ ಸ್ವರೂಪದ್ದಾಗಿರುವ ಕಾರಣ ಎಸ್ ಐಟಿ ರಚಿಸಲಾಗಿದೆ. ನಿಜಾಂಶ ಹೊರಬರಬೇಕು ಎಂಬುದೇ ಎಸ್ ಐಟಿ ರಚನೆಯ ಉದ್ದೇಶವಾಗಿದೆ.
ತನಿಖೆ ಉತ್ತಮವಾಗಿ ನಡೆಯುತ್ತಿರುವುದರಿಂದ ಯಾರಿಗೂ ತನಿಖೆ ಬಗ್ಗೆ ಅನುಮಾನವಿಲ್ಲ, ಸತ್ಯಾಂಶವನ್ನು ನಾವು ಜನರ ಮುಂದೆ ಇಡುತ್ತೇವೆ. ಯಾರ್ಯಾರೋ ಹೇಳಿದ್ದಕ್ಕೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದರ ಹಿಂದೆ ಷಡ್ಯಂತ್ರ ಇದ್ದರೆ ಅದನ್ನು ಕೂಡ ಪರಿಗಣಿಸಬೇಕಾಗುತ್ತದೆ. ಯಾವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಎಲ್ಲ ಸಂಗತಿಗಳನ್ನು ತನಿಖೆ ಮೂಲಕವೇ ತಿಳಿದುಕೊಳ್ಳಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Leave feedback about this