ದೆಹಲಿ:- 2013ರಿಂದ 2018ರವರೆಗೆ ಕನಾಟಕದ ಆಡಳಿತ ಪಕ್ಷದ ಸಂಘಟನೆ, ನಿರ್ಣಯಗಳು ಎಲ್ಲವನ್ನು ಗಾಂಧಿ ಕುಟುಂಬವು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಗೆ ಹೇಳುತ್ತಾರೋ ಹಾಗೇ ಅನ್ನುತ್ತಿತ್ತು. ಹೆಚ್ಚೆಂದರೆ ಖರ್ಗೆ ಮತ್ತು ಪರಮೇಶ್ವರ ಅವರ ಅಭಿಪ್ರಾಯ ಪಡೆದು ಮುಂದೆ ಹೋಗಿ ಅನ್ನುತ್ತಿತ್ತು. ಸಹಜವಾಗಿ ದಿಲ್ಲಿ ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯ ಎದುರು ದುರ್ಬಲರಂತೆ ಕಾಣುತ್ತಿದ್ದರು. ಆದರೆ, 2023ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಏಕಾಏಕಿ ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ವಿಷಯದಲ್ಲಿ “ನಾವು ಹೇಳಿದ್ದನ್ನು ನೀವು ಕೇಳಿ ಸಾಕು” ಅನ್ನುತ್ತಿದೆ ಎನ್ನುವ ರೀತಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ.
ಲೋಕಸಭಾ ಚುನಾವಣೆ ಆದ ಮೇಲೆ ಸಿದ್ದರಾಮಯ್ಯನವರು ಸಂಪುಟ ಪುನಾರಚನೆ ಮಾಡುತ್ತೇನೆ ಎಂದರೆ, ಹೈಕಮಾಂಡ್ ಓಕೆ ಅನ್ನಲಿಲ್ಲ. ಅಷ್ಟೇ ಅಲ್ಲ ಸತೀಶ್ ಜಾರಕಿಹೊಳಿ, ರಾಜಣ್ಣ, ಜಮೀರ್ ಅಹ್ಮದ್ ಖಾನ್, ಪರಮೇಶ್ವರ್, ಎಂ.ಬಿ.ಪಾಟೀಲ್, ಮಹದೇವಪ್ಪನವರು ಹೋಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಜಾಗಕ್ಕೆ ಬೇರೆಯವರನ್ನು ತನ್ನಿ ಅಂದಾಗಲೂ ‘ಮುಂದಿನ ಡಿಸೆಂಬರ್‌ವರೆಗೆ ಏನಿಲ್ಲ, ಸುಮ್ಮನೆ ಇರಿ’ ಎಂದು ಹೇಳಿ ಕಳುಹಿಸಿತು. ಕಾಲು ತುಳಿತದ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನು ಜವಾಬ್ದಾರಿಯಿಂದ ಮುಕ್ತ ಮಾಡಿ ಎಂದು ಹೇಳಿದ ದಿಲ್ಲಿ ಹೈಕಮಾಂಡ್, ಸಿದ್ದರಾಮಯ್ಯ ಅವರ ಹೃದಯಕ್ಕೆ ಹತ್ತಿರದ ಜಾತಿ ಗಣತಿ ವಿಷಯದಲ್ಲಿ ಕಾಲು ದಾರಿಗೆ ಬಂದಿದ್ದ ಮುಖ್ಯಮಂತ್ರಿಗಳಿಗೆ ಕ್ಯಾಬಿನೆಟ್‌ನಲ್ಲೇನು ನಿರ್ಣಯ ತೆಗೆದುಕೊಳ್ಳಬೇಕು? ಹೇಗೆ ಯು ಟರ್ನ್ ಹೊಡೆಯಬೇಕು ಎಂದು ರಾಷ್ಟ್ರೀಯ ಮಾಧ್ಯಮಗಳ ಎದುರು ನಿಲ್ಲಿಸಿಕೊಂಡು ‘ಗಿಳಿ ಪಾಠ’ ಹೇಳಿ ಕಳುಹಿಸಿತು.
ಈಗ ರಾಜಣ್ಣ ಸರದಿ, ಮುಖ್ಯಮಂತ್ರಿಗಳ ಪರವಾಗಿ ಪ್ರತಿದಿನ ಮಾತನಾಡುತ್ತಿದ್ದ ರಾಜಣ್ಣರನ್ನು ಸ್ವತಃ ಮುಖ್ಯಮಂತ್ರಿಗಳೇ ಪತ್ರ ಬರೆದು ವಜಾ ಮಾಡಿ ಅನ್ನುವ ಸ್ಥಿತಿ ಬಂದಿದ್ದು ವಿಪರ್ಯಾಸ ಅಲ್ಲದೇ ಮತ್ತೇನು?. ಇವುಗಳನ್ನೆಲ್ಲ ಮಾಸ್ ಲೀಡರ್ ಆದ ಸಿದ್ದರಾಮಯ್ಯನವರು ಹೇಗೆ ಸಹಿಸಿಕೊಳ್ಳುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಸ್ವತಃ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು. ಮೇಲುನೋಟಕ್ಕೆ ನೋಡಿದರೆ, ರಾಜಣ್ಣ ವಿಷಯದ ಬಗ್ಗೆ ಮುಖ್ಯಮಂತ್ರಿಗಳ ಮೌನ ಗಮನಿಸಿದರೆ ‘ವಜಾ’ ಪ್ರಕರಣದಿಂದ ಅವರಿಗೆ ತುಂಬಾ ಬೇಸರ ಮುಜುಗರ ಆಗಿದೆ ಅನ್ನೋದು ಅರ್ಥ ಆಗುತ್ತದೆ ಮತ್ತು ಯಾವುದೇ ಜನ ನಾಯಕರಿಗೆ ಹೀಗೆ ಅನ್ನಿಸೋದು ಸಹಜ ಕೂಡ ಹೌದು.
Leave feedback about this