ಬೆಂಗಳೂರು:- ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ.
ಈ ತನಿಖೆ ಕುರಿತಂತೆ ಕಳೆದ ವಾರ ನಡೆದ ವಿಧಾನಸಭೆ ಸದನದಲ್ಲಿ ಸಹ ಬಿಜೆಪಿ ಶಾಸಕರು ಪ್ರಶ್ನಿಸಿ ಎಸ್ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಮಧ್ಯಂತರ ವರದಿ ನೀಡಬೇಕೆಂದು ಆಗ್ರಹಿಸಿದ್ದರು.
ಹೀಗೆ ಧರ್ಮಸ್ಥಳ ಎಸ್ಐಟಿ ಕುರಿತು ತಮಗೆ ಬಂದ ಹಲವಾರು ಪ್ರಶ್ನೆಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್ ಇಂದು ( ಆಗಸ್ಟ್ 18 ) ನಡೆದ ಸದನದಲ್ಲಿ ಉತ್ತರಿಸಿದರು. ಈ ವೇಳೆ ಧರ್ಮಸ್ಥಳ ತನಿಖೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಎಸ್ಐಟಿಗೆ ನೀಡಲಾಗಿದೆ, ಅವರು ವರದಿಯನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೂ ನಾವು ಯಾವುದೇ ರೀತಿಯ ಒತ್ತಡವನ್ನು ಹಾಕಲು ಬರುವುದಿಲ್ಲ ಎಂದು ತಿಳಿಸಿದರು.
ಇನ್ನು ದೂರುದಾರನ ಕುರಿತು ಮಾಹಿತಿಯನ್ನು ಕೇಳಿ ಪ್ರಶ್ನಿಸಿದ್ದರ ಬಗ್ಗೆ ಸಹ ಮಾತನಾಡಿದ ಪರಮೇಶ್ವರ್ ಕೇಂದ್ರ ಸರ್ಕಾರದ ಸಾಕ್ಷಿದಾರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆತನ ಗುರುತನ್ನು ಬಹಿರಂಗಪಡಿಸದೇ ಇರಿಸಲಾಗಿದೆ ಎಂದು ತಿಳಿಸಿದರು. ಆತನ ಹೆಸರಿನ ಆಂಗ್ಲ ವರ್ಣಮಾಲೆಯ ಮೊದಲ ಅಕ್ಷರವನ್ನು ಮಾತ್ರ ಬಳಸಲಾಗಿದ್ದು, ಎಸ್ಐಟಿಯವರು ʼವಿʼ ಎಂದು ಹೆಸರು ಕೊಟ್ಟಿದ್ದಾರೆ ಎಂದರು. ಈ ಮೂಲಕ ಆತನ ಹೆಸರು ಭೀಮ ಅಲ್ಲ ಎಂಬುದು ಖಚಿತವಾಗಿದೆ.
ಈ ಮೂಲಕ ಗೃಹ ಸಚಿವರ ಸೂಕ್ಷ್ಮ ಪ್ರಕರಣದ ಕುರಿತು ದೂರು ನೀಡಿರುವ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲು ಪ್ರಾಶಸ್ತ್ಯ ನೀಡಿದರು.
Leave feedback about this