ಬೆಂಗಳೂರು:- ನಟ ದರ್ಶನ್ ಆದಷ್ಟು ಬೇಗ ನೆಚ್ಚಿನ ನಟ ಜೈಲಿನಿಂದ ಬಿಡುಗಡೆ ಆಗ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ‘ಡೆವಿಲ್’ ಸಿನಿಮಾ ಭವಿಷ್ಯ ಏನು? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿದಿದೆ. ದರ್ಶನ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡ ಮಾಡಿದ್ದಾರೆ ಎನ್ನಲಾಗ್ತಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇತ್ತು.
ಮಿಲನಾ ಪ್ರಕಾಶ್ ‘ಡೆವಿಲ್’ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ದರ್ಶನ್ ಕಳೆದ ವರ್ಷ ಜೈಲಿಗೆ ಹೋದಾಗಲೇ ಚಿತ್ರದ ಬಗ್ಗೆ ಸಾಕಷ್ಟು ಅಂತೆಕಂತೆ ಸುದ್ದಿ ಹರಿದಾಡಿತ್ತು. ಪ್ರಕಾಶ್ ಸಾಲ ಮಾಡಿ ಸಿನಿಮಾ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗ್ತಿತ್ತು. ಈ ವಿಚಾರದ ಬಗ್ಗೆ ಪ್ರಕಾಶ್ ಸಂಬಂಧಿ ಪಾರ್ವತಮ್ಮ ಸಹೋದರ, ನಿರ್ಮಾಪಕ ಚಿನ್ನೇಗೌಡ್ರು ಪ್ರತಿಕ್ರಿಯಿಸಿದ್ದಾರೆ.
‘ಡೆವಿಲ್’ ಸಿನಿಮಾ ಬಗ್ಗೆ ಹೇಳಿದಾಗ ಟೈಟಲ್ ಯಾಕೋ ಚೆನ್ನಾಗಿಲ್ಲ ಎಂದು ನಾನು ಹೇಳಿದ್ದೆ. ಬಳಿಕ ಚಿತ್ರಕ್ಕೆ ಸೂಕ್ತ ಎಂದರು. ನಾನು ಚಿತ್ರದ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದೆ. ನಮ್ಮ ಕುಟುಂಬದ ಜೊತೆ ದರ್ಶನ್ ಒಡನಾಟ ಹಲವು ವರ್ಷಗಳದ್ದು. ನಾನೇ ಆತನಿಗೆ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆ ಕಲಿಯಲು ಸಹಾಯ ಮಾಡಿದ್ದೆ ಎಂದಿದ್ದಾರೆ. ಇವತ್ತಿಗೂ ನಮ್ಮ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾನೆ ಎಂದು ಚಿನ್ನೇಗೌಡ್ರು ಹೇಳಿದ್ದಾರೆ.
ಸಾಲ ಮಾಡಿ ‘ಡೆವಿಲ್’ ಚಿತ್ರ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೂ ಚಿನ್ನೇಗೌಡ್ರು ಪ್ರತಿಕ್ರಿಯಿಸಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನ್ಮಾ ಮಾಡಿದ್ದಾರೆ. ಆ ಹಣ ಹೇಗೆ ಬಂತು ಗೊತ್ತಿಲ್ಲ. ಅದು ನಿರ್ಮಾಪಕರಿಗೆ ಬಿಟ್ಟ ವಿಷಯ. ನಿರ್ಮಾಪಕರಿಗೆ ಒಳ್ಳೆಯದಾಗಬೇಕು ಎಂದು ಬಯಸುತ್ತೇನೆ. ಸಿನ್ಮಾ ಚಿತ್ರೀಕರಣ ಮುಗಿದಿರುವುದು ನಿಜ. ಶೀಘ್ರದಲ್ಲೇ ಬಿಡುಗಡೆ ಮಾಡ್ತಾರೆ. ಡೇಟ್ಸ್ ಫಿಕ್ಸ್ ಮಾಡಬೇಕು. ಬಿಡುಗಡೆ ಮಾಡ್ಲೇಬೇಕಲ್ಲ, ಅವ್ನು ಸಾಲ ಸೋಲ ಮಾಡಿ ಸಿನ್ಮಾ ನಿರ್ಮಿಸಿದ್ದಾನೆ ನಮ್ಮ ಹುಡುಗ, ಅವನಿಗು ಒಳ್ಳೆಯದಾಗಬೇಕು ಎಂದಿದ್ದಾರೆ.
Leave feedback about this